ಪುತ್ತೂರು : ನೆಲ್ಲಿಕಟ್ಟೆ ಸರಕಾರಿ ಹಿ ಪ್ರಾ ಶಾಲೆಯಲ್ಲಿ ರೋಟರಿಕ್ಲಬ್ ಪುತ್ತೂರು ಸಿಟಿ ,ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ವಿದ್ಯಾ ಜ್ಯೋತಿ ಎಲ್ ಕೆ ಜಿ ಮತ್ತು ಯುಕೆಜಿ ಹಾಗೂ ಅಂಗನವಾಡಿ ಪುನಶ್ಚೇತನ ರೋಟರಿ ಜಿಲ್ಲಾ ಯೋಜನೆಯನ್ನು ಶನಿವಾರ ಉದ್ಘಾಟಿಸಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿ ಮಾತನಾಡಿ, ಸರಕಾರ ಮಾಡಬೇಕಾದ ಕೆಲಸವನ್ನು ರೋಟರಿ ಕ್ಲಬ್ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ಒಂದು ವರ್ಷದೊಳಗೆ ಎಲ್ಲಾ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಎಲ್ ಕೆ ಜಿ ತರಗತಿ ಆರಂಭ ಮಾಡಲಾಗುವುದು. ಶಿಕ್ಷಕರ ನೇಮಕಾತಿಯೂ ಪೂರ್ಣಗೊಳ್ಳಲಿದೆ. ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದರು.
ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುರೇಂದ್ರ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಗವರ್ನರ್ ವಿಕ್ರಂ ದತ್ತ, ವಲಯ 4ರ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್, ಶಿಕ್ಷಣಾಧಿಕಾರಿಗಳ ಕಚೇರಿಯ ಹರಿಪ್ರಸಾದ್, ನಗರಸಭೆ ಸದಸ್ಯ ಶಕ್ತಿ ಸಿನ್ಹ, ಶಾಲಾ ಮುಖ್ಯ ಶಿಕ್ಷಕಿ ಯಶೋಧ, ಎಸ್‍ಡಿಎಂಸಿ ಅಧ್ಯಕ್ಷೆ ವಸುಧಾ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ಕಾರ್ಯದರ್ಶಿ ಶ್ಯಾಮಲ ಎಂ.ಶೆಟ್ಟಿ ಉಪಸ್ಥಿತರಿದ್ದರು.
























