ಚುರುಕುಗೊಂಡ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ

ಬೆಂಗಳೂರು : ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದೆ. ಇಂದು ಮತ್ತು ನಾಳೆ ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಎರಡು ದಿನಗಳ ಸಭೆಯ ಬಳಿಕ ರಾಜ್ಯ ಚುನಾವಣಾ ಸಮಿತಿಯಿಂದ ಕೇಂದ್ರ ಚುನಾವಣಾ ಸಮಿತಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಶಿಫಾರಸುಗೊಳ್ಳಲಿದೆ. ಎರಡು ದಿನ ನೆಲಮಂಗಲದ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಸಂಗ್ರಹಿಸಲಾದ ಆಕಾಂಕ್ಷಿಗಳ ಪಟ್ಟಿಯನ್ನು ಚುನಾವಣಾ ಸಮಿತಿ ಫಿಲ್ಟರ್ ಮಾಡಲಿದ್ದು, ಪ್ರತಿ ಕ್ಷೇತ್ರಕ್ಕೆ ಮೂರು ಸಂಭಾವ್ಯ ಅಭ್ಯರ್ಥಿಗಳ ಹೆಸರು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ರವಾನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜೆಪಿ ರಾಜ್ಯ ಚುನಾವಣಾ ಸಮಿತಿ ಸಭೆ ಕಚೇರಿ ಯಲಹಂಕ ರೆಸಾರ್ಟ್‌ಗೆ ಶಿಫ್ಟ್ ಆಗಿದ್ದು, ಎರಡು ದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಸಭೆ ನಡೆಯಲಿದೆ.

ಸಭೆಯಲ್ಲಿ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ‌ ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ‌, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂಗಳಾದ ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.‌

ಅಭ್ಯರ್ಥಿಗಳ ಆಯ್ಕೆ ಸಂಬಂಧ ಎರಡು ದಿನ ಬೆಂಗಳೂರಿನಲ್ಲಿ ಕೋರ್​ ಕಮಿಟಿ ಸಭೆ ಮಾಡಲಾಗಿತ್ತು. ಆ ಸಭೆಯಲ್ಲಿ ರಮೇಶ್​ ಜಾರಕಿಹೊಳಿ ಹಾಗೂ ಈರಣ್ಣ ಕಡಾಡಿ ಜಟಾಪಟಿ ನಡೆದಿತ್ತು. ನಿಮ್ಮ ಭಿನ್ನಮತವನ್ನ ಬೆಳಗಾವಿಯಲ್ಲೇ ಶಮನಮಾಡಿಕೊಂಡು ಬನ್ನಿ ಎಂದು ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದರು. ಹೀಗಾಗಿ ರಾತ್ರೋರಾತ್ರಿ ಬೆಳಗಾವಿಗೆ ದೌಡಾಯಿಸಿದ್ದ ಪ್ರಹ್ಲಾದ್​ ಜೋಶಿ ಮತ್ತು ನಿರ್ಮಲ್​ ಕುಮಾರ್ ಸುರಾಣ ಬೆಳಗಾವಿ ಉತ್ತರ ಹಾಗೂ ದಕ್ಷಿಣ ಪದಾಧಿಕಾರಿಗಳ ಜತೆ ಸಭೆ ನಡೆಸಿ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.





















































 
 

ಬೆಳಗಾವಿ ಗುದ್ದಾಟ ಕಂಟ್ರೋಲ್ ಮಾಡುವುದಕ್ಕೆ ಒದ್ದಾಡುತ್ತಿರುವಾಗಲೇ ಶಿವಮೊಗ್ಗದಲ್ಲೂ ಬಿಜೆಪಿಗೆ ಬಂಡಾಯ ಬಿಸಿ ತಟ್ಟಿದೆ. ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ವಿರುದ್ಧ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬೇಗುದಿ ಕುದಿಯುತ್ತಿದೆ. ಈಶ್ವರಪ್ಪ ವಿರುದ್ಧ ವಿರೋಧಿ ಅಲೆ ಎದ್ದಿದ್ದು, ಆಕಾಂಕ್ಷಿಗಳೆಲ್ಲ ತಮಗೆ ಟಿಕೆಟ್‌ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಬಿಜೆಪಿ ಸಹ ಹೊಸ ಮುಖಕ್ಕೆ ಮಣೆ ಹಾಕಲು ಪ್ಲ್ಯಾನ್ ಮಾಡಿದ್ದು ಈಶ್ವರಪ್ಪ ಟಿಕೆಟ್‌ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಹೊಸಬರಿಗೆ ಮಣೆ ಹಾಕಲು ಕೇಸರಿ ತಂತ್ರ ರೂಪಿಸಿದೆ. ಹೀಗಾಗಿ ಈಶ್ವರಪ್ಪ ಪುತ್ರ ಕಾಂತೇಶ್, ಧನಂಜಯ ಸರ್ಜಿ, ಜ್ಯೋತಿ ಪ್ರಕಾಶ್ ಶಿವಮೊಗ್ಗ ನಗರ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಡಾ. ಧನಂಜಯ ಸರ್ಜಿ ಅಥವಾ ಜ್ಯೋತಿ ಪ್ರಕಾಶ್‌ಗೆ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಕೋರ್‌ ಕಮಿಟಿಯಲ್ಲಿ ಚರ್ಚೆಯಾಗಿದೆ. ಟಿಕೆಟ್‌ಗಾಗಿ ಬಿಜೆಪಿ ಎಂಎಲ್‌ಸಿ ಆಯನೂರು ಮಂಜುನಾಥ್ ಬಂಡಾಯ ಎದ್ದಿದ್ದು, ಈಶ್ವರಪ್ಪ ವಿರುದ್ಧ ತೊಡೆ ತಟ್ಟಿದ್ದಾರೆ. ಈ ಬಂಡಾಯದ ಲಾಭ ಪಡೆಯಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು ಆಯನೂರು ಮಂಜುನಾಥ್‌ಗೆ ಗಾಳ ಹಾಕಿ ಕಣಕ್ಕಿಳಿಸಲು ಸ್ಕೆಚ್ ಹಾಕಿದೆ.

ಈಶ್ವರಪ್ಪ ಸೇರಿ 20ರಿಂದ 25 ಹಾಲಿ ಶಾಸಕರಿಗೆ ಈ ಸಲ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಲ್ಲಿ ಕರಾವಳಿಯ ಕೆಲವು ಶಾಸಕರ ಹೆಸರೂ ಕೇಳಿಬರುತ್ತಿದೆ. ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ತೀವ್ರ ಕುತೂಹಲ ಮೂಡಿಸಿದ್ದು, ಅಂತಿಮವಾಗಿ ಯಾರಿಗೆಲ್ಲ ಟಿಕೆಟ್​ ಸಿಗುತ್ತೆ ಎನ್ನವುದು ಕಾದುನೋಡಬೇಕಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top