ಬಳ್ಳಾರಿಯಲ್ಲಿ ಸಹೋದರರ ಸವಾಲು

ಸೋಮಶೇಖರ ರೆಡ್ಡಿ ವಿರುದ್ಧ ಜನಾರ್ದನ ರೆಡ್ಡಿ ಪತ್ನಿ ಸ್ಪರ್ಧೆ ಫೈನಲ್‌

ಬಳ್ಳಾರಿ: ಕಳೆದ ಕೆಲವು ವರ್ಷಗಳಿಂದ ರೆಡ್ಡಿ ಕುಟುಂಬದ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲೀಗ ಬಿರುಕು ಕಾಣಿಸಿಕೊಂಡಿದೆ. ಬಿಜೆಪಿಯಿಂದ ಹೊರಹೋಗಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಎಂಬ ಸ್ವಂತ ಪಕ್ಷ ಸ್ಥಾಪಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಯಿಂದ ಪತ್ನಿ ಲಕ್ಷ್ಮೀ ಅರುಣಾ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.
ಪ್ರಸ್ತುತ ಜನಾರ್ದನ ರೆಡ್ಡಿಯವರ ಸಹೋದರ ಸೋಮಶೇಖರ ರೆಡ್ಡಿಯವರು ಇಲ್ಲಿಯ ಬಿಜೆಪಿ ಶಾಸಕ. ತಾನು ಬಿಜೆಪಿಯಿಂದಲೇ ಸ್ಪರ್ಧಿಸುವುದಾಗಿ ಸೋಮಶೇಖರ ರೆಡ್ಡಿ ಹೇಳುವುದರೋಮದಿಗೆ ಬಳ್ಳಾರಿ ರೆಡ್ಡಿ v/s ರೆಡ್ಡಿ ಹೈವೊಲ್ಟೇಜ್‌ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಗಾಲಿ ಲಕ್ಷ್ಮೀ ಅರುಣಾ ಅವರು ಬಳ್ಳಾರಿ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಸೋಮಶೇಖರ್ ರೆಡ್ಡಿಯವರು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ತಮ್ಮನಿಗಾಗಿ 63 ದಿನ ಜೈಲು ಸೇರಿದೆ. ಅವನನ್ನು ಜೈಲಿನಿಂದ ಬಿಡುಗಡೆ ಮಾಡಲು ಹಗಲು ರಾತ್ರಿ ಹೋರಾಡಿದ್ದೆ. ತಮ್ಮನ ಪತ್ನಿ ಲಕ್ಷ್ಮೀ ಅರುಣಾ ಸಹ ನಿಮ್ಮ ಋುಣ ತೀರಿಸಲು ಸಾಧ್ಯವಿಲ್ಲ ಮಾಮಾ ಎಂದಿದ್ದಳು. ಅವರ ಪುತ್ರಿ ಸಹ ಇದೇ ಮಾತು ಹೇಳಿದ್ದಳು. ಅವರಿಗಾಗಿ ಇಷ್ಟೆಲ್ಲ ತ್ಯಾಗ ಮಾಡಿದ್ದೆ. ಆದಾಗ್ಯೂ ನನ್ನ ವಿರುದ್ಧವೇ ಅವರು ಸ್ಪರ್ಧಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗಣಿಗಾರಿಕೆಯಿಂದ ಅವರು ಸಂಪಾದನೆ ಮಾಡಿಕೊಂಡರು. ನಾನೇನು ಮಾಡಿಕೊಂಡಿಲ್ಲ. ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲಿಗೆ ಹೋದ ಕಾರಣ 2013ರಲ್ಲಿ ಚುನಾವಣೆಗೂ ಸ್ಪರ್ಧಿಸಿರಲಿಲ್ಲ. ಆತನಿಗಾಗಿ ನಾನೂ ಜೈಲಿಗೆ ಹೋಗಬೇಕಾಯಿತು. ತಮ್ಮನಿಗಾಗಿ ಅಷ್ಟೆಲ್ಲ ತ್ಯಾಗ ಮಾಡಿದೆ. ಆದರೂ ತಮ್ಮನ ಪತ್ನಿ ನನ್ನ ವಿರುದ್ಧವೇ ಸ್ಪರ್ಧಿಸುತ್ತಿರುವುದು ಸರಿಯಾ ಪ್ರಶ್ನಿಸಿದರು.
ಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಪಕ್ಷ ಟಿಕೆಟ್‌ ನೀಡಲಿದೆ ಎಂಬ ವಿಶ್ವಾಸವಿದೆ. ಒಂದು ವೇಳೆ ನೀಡದಿದ್ದರೂ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಮತ್ತೆ ಬಿಜೆಪಿ ಸೇರುವೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಘೋಷಣೆ ಅನಿರೀಕ್ಷಿತವಲ್ಲ. ನಿರೀಕ್ಷೆಯಂತೆ ಅವರು ಅಭ್ಯರ್ಥಿ ಹಾಕಿದ್ದಾರೆ. ನನ್ನ ಸಹೋದರ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ನನ್ನನ್ನು ಬರುವಂತೆ ಕೇಳಿದರು. ಅದಕ್ಕೆ ನಾನು ಒಪ್ಪಲಿಲ್ಲ. ಪಕ್ಷ ಕಟ್ಟುವುದು ಬೇಡ. ಬಿಜೆಪಿಯಲ್ಲಿಯೇ ಇರೋಣ ಎಂದು ಹೇಳಿದ್ದೆ. ನಾನು, ನನ್ನ ಹಿರಿಯ ಸಹೋದರ ಕರುಣಾಕರ ರೆಡ್ಡಿ, ಶ್ರೀರಾಮುಲು ಸೇರಿದಂತೆ ಎಲ್ಲರೂ ತಮ್ಮನಿಗೆ ತಿಳಿ ಹೇಳಿದೆವು. ಆದರೆ, ನಮ್ಮ ಮಾತು ಕೇಳಲಿಲ್ಲ. ನಾನು ಪಕ್ಷಕ್ಕೆ ಹೋಗಲಿಲ್ಲ ಎಂಬ ಕಾರಣಕ್ಕಾಗಿ ನನ್ನ ವಿರುದ್ಧ ತನ್ನ ಪತ್ನಿಯನ್ನು ಸ್ಪರ್ಧೆಗೆ ಇಳಿಸಿದ್ದಾನೆ. ಹಾಗಂತ ನಾನು ವಿಚಲಿತನಾಗಿಲ್ಲ. ಬಳ್ಳಾರಿ ಜನರ ಪರವಾಗಿ ಈ ವರೆಗೆ ಕೆಲಸ ಮಾಡಿದ್ದೇನೆ. ಹೀಗಾಗಿ ನಾನು ಗೆದ್ದೇ ಗೆಲ್ಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನಾರ್ದನ ರೆಡ್ಡಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ನನಗೆ ಯಾವುದೇ ರೀತಿಯ ನೋವಿಲ್ಲ. ಒಂದು ವೇಳೆ ಇದ್ದರೂ ಜನರ ಸೇವೆಯಲ್ಲಿ ಎಲ್ಲ ನೋವನ್ನು ಮರೆಯುತ್ತೇನೆ. ನಾನು ಯಾವುದೇ ಕಾರಣಕ್ಕೂ ಚುನಾವಣೆಯಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ. ನೂರಕ್ಕೆ ನೂರರಷ್ಟು ನಾನು ಸ್ಪರ್ಧೆ ಮಾಡುವುದು ಖಚಿತ. ಬಳ್ಳಾರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ನಾನು ಅಡ್ಜಸ್ಟ್‌ಮೆಂಟ್‌ ರಾಜಕಾರಣಿ ಅಲ್ಲ, ಅದು ನನ್ನ ಜಾಯಮಾನದಲ್ಲಿಯೇ ಇಲ್ಲ ಎಂದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top