ಪುತ್ತೂರು : ಕೊಂಬೆಟ್ಟು ದ್ರಾವಿಡ ಬ್ರಾಹ್ಮಣರ ವಿದ್ಯಾರ್ಥಿ ಭವನ ಹಾಗೂ ಕ್ಷೇಮಾಭಿವೃದ್ಧಿ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಫೆ.5 ಆದಿತ್ಯವಾರ ಭವನದ ಸಭಾಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಸತ್ಯನಾರಾಯಣ ಭಟ್ ತಿಳಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1923 ರಲ್ಲಿ ದಿ.ಎಚ್.ವಾಸುದೇವ ರಾವ್ ಅವರು ಭವನದ ಸ್ಥಾಪನೆಗೆ ಕಾರಣಕರ್ತರಾಗಿದ್ದು, ಹೊರ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ ಉಳಕೊಳ್ಳುವ ನಿಟ್ಟಿನಲ್ಲಿ ಸ್ಥಾಪಿಸಲಾಯಿತು. ಬಳಿಕ 1985 ರ ತನಕ ಉತ್ತಮವಾಗಿ ನಡೆದುಕೊಂಡು ಬರುತ್ತಿದ್ದ ಭವನ ಬಳಿಕದ ದಿನಗಳಲ್ಲಿ ಮಕ್ಕಳ ಸಂಖ್ಯೆ ಇಲ್ಲದ್ದರಿಂದ ಮುಚ್ಚಬೇಕಾಯಿತು. ಬಳಿಕದ ದಿನಗಳಲ್ಲಿ ಸಂಘದ ಸದಸ್ಯರಿಗೆ, ಸಮಾಜದವರಿಗೆ ಶುಭ ಸಮಾರಂಭಗಳಿಗೆ ಭವನವನ್ನು ಕೊಡಲು ಆರಂಭಿಸಲಾಯಿತು. ಇದೀಗ ಈ ಭವನ ಶತಮಾನೋತ್ಸವದ ಹೊಸ್ತಿಲಲ್ಲಿದ್ದು, ಶತಮಾನೋತ್ಸವ ಆಚರಿಸಲಾಗುವುದು ಎಂದು ಅವರು ತಿಳಿಸಿದರು.
ಆದಿತ್ಯವಾರ ಬೆಳಗ್ಗೆ ಶ್ರೀ ಚಂಡಿಕಾಯಾಗದೊಂದಿಗೆ ಶತಮಾನೋತ್ಸವ ಆರಂಭಗೊಳ್ಳಲಿದೆ. ಬಳಿಕ 11.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಕಟೀಲು ಹರಿನಾರಾಯಣ ಅಸ್ರಣ್ಣರು ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಲಿರುವರು. ಮುಖ್ಯ ಅತಿಥಿಗಳಾಗಿ ಶಾಸಕ ಸಂಜೀವ ಮಠಂದೂರು, ವಿವೇಕಾನಂದ ಕಾಲೇಜು ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ, ನ್ಯಾಯವಾದಿ ರಾಮ್ ಮೋಹನ್ ರಾವ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ರಂಗನಾಥ ರಾವ್, ನಿರ್ದೇಶಕರಾದ ಪ್ರೇಮಲತಾ ರಾವ್, ಕಾರ್ಯದರ್ಶಿ ಎಚ್.ಕೃಷ್ಣಪ್ರಸಾದ್ ರಾವ್ ಉಪಸ್ಥಿತರಿದ್ದರು.
























