ಕೆಎಂಎಫ್-ಅಮುಲ್ ವಿಲೀನ ಪ್ರಸ್ತಾವಕ್ಕೆ ಕನ್ನಡಿಗರಿಂದ ತೀವ್ರ ವಿರೋಧ
ಬೆಂಗಳೂರು: ಕರ್ನಾಟಕದ ರೈತರಿಗೆ ನೆರವಾಗಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಅಮುಲ್ ಇಂಡಿಯಾ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ನಿಟ್ಟಿಗಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಷಾ ಅವರ ಸಲಹೆ ಕೆಎಂಎಫ್ ಅವಲಂಬಿಸಿರುವ 25 ಲಕ್ಷ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯದಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆವರಣದಲ್ಲಿ ಶುಕ್ರವಾರ ನಡೆದ ಮೆಗಾ ಡೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಮಿತ್ ಶಾ ಅವರು ಅಮುಲ್ ಹಾಗೂ ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದಿದ್ದರು. ಕೆಎಂಎಫ್ ಹಾಗೂ ಅಮೂಲ್ ವಿಲೀನದ ಕುರಿತು ಅಮಿತ್ ಶಾ ಈ ಹಿಂದೆಯೂ ಹೇಳಿಕೆ ನೀಡಿದ್ದರು. ಈಗ ಮತ್ತೆ ಅದೇ ಮಾತನ್ನು ಪುನರುಚ್ಚರಿಸಿರುವುದು ರೈತರು ಹಾಗೂ ಸಹಕಾರಿಗಳಲ್ಲಿ ಆತಂಕ ಮೂಡಿಸಿದೆ.
ಸುಮಾರು 20,000 ಕೋಟಿ ರೂ.ಗಿಂತಲೂ ಹೆಚ್ಚು ವಹಿವಾಟು ಹೊಂದಿರುವ ಕೆಎಂಎಫ್ ಅನ್ನು ಅಮುಲ್ ಸಂಸ್ಥೆಯಲ್ಲಿ ವಿಲೀನಗೊಳಿಸುವ ವಿಚಾರ ಆಗಾಗ್ಗೆ ಮುನ್ನೆಲೆಗೆ ಬರುತ್ತಿದೆ. ಸಹಕಾರ ಕ್ಷೇತ್ರ ರಾಜ್ಯದ ವಿಚಾರವಾಗಿದೆ. ಆದರೆ ಹೊಸದಾಗಿ ಕೇಂದ್ರದಲ್ಲಿ ಸಹಕಾರ ಸಚಿವಾಲಯ ಅಸ್ತಿತ್ವಕ್ಕೆ ಬಂದ ನಂತರ ಲಾಭದಾಯಕ ಮಹಾಮಂಡಳಗಳ ವಿಲೀನ ವಿಚಾರ ಚರ್ಚೆ ಶುರುವಾಗಿದೆ.
ಬ್ಯಾಂಕ್‌ಗಳ ವಿಲೀನದಂತೆಯೇ ಹಾಲು ಮಹಾಮಂಡಳಗಳ ವಿಲೀನ ಅಪಾಯಕಾರಿಯಾಗಲಿದೆ. ಕನ್ನಡಿಗರ ಕೈಯಲ್ಲಿರುವ ಆಡಳಿತ ಚುಕ್ಕಾಣಿ ಕೈತಪ್ಪುವ ಆತಂಕವಿದೆ. ನಂದಿನಿ ಎಂಬುದು ಕೇವಲ ಒಂದು ಬ್ರಾಂಡ್ ಅಲ್ಲ. ಅದು ಕರ್ನಾಟಕದ ಹೆಗ್ಗುರುತು. ಹಾಲು ಉತ್ಪಾದಕರ ಹೆಮ್ಮೆಯ ಸಂಸ್ಥೆ. ಅಮುಲ್‌ನೊಂದಿಗೆ ವಿಲೀನವಾದರೆ ಬೆಳವಣಿಗೆಯಾಗುವುದಿಲ್ಲ. ಆ ಪ್ರಸ್ತಾಪವೇ ಬೇಡ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಶನ್ ಮುಳುಗಿಸಿದ ನಂತರ ಈಗ ನಂದಿನಿ ಸರದಿ. ಅಮೂಲ್ ಸಂಸ್ಥೆಯನ್ನೇ ನಂದಿನಿಯಲ್ಲಿ ವಿಲೀನಗೊಳಿಸಿ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಆತಂಕ, ಆಗ್ರಹ ವ್ಯಕ್ತವಾಗಿದೆ.
ಕರ್ನಾಟಕದ ಹಾಲು ಉತ್ಪಾದಕ ರೈತರು 20,000 ಕೋಟಿ ರೂ.ವರೆಗೆ ಹಾಲಿನ ವಹಿವಾಟು ನಡೆಸುತ್ತಾರೆ. ಈ ಲಕ್ಷಾಂತರ ಕುಟುಂಬಗಳ ಮನೆಯಲ್ಲಿ ದೀಪ ಬೆಳಗುವುದೇ ಹಾಲಿನಿಂದ. ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚಿನಿಂದ ಹಿಡಿದು, ಅಕ್ಕಿ, ಬೇಳೆ, ಬಟ್ಟೆ-ಬರೆ ಮುಂತಾದವುಗಳೆಲ್ಲಹಾಲಿನಿಂದಲೇ ಬರಬೇಕು. ಇಂತಹ ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಈಗ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದ ಕಡೆ, ಅವರು ಕಾಲು ಇಟ್ಟ ಕಡೆಯೆಲ್ಲಾ ಸರ್ವನಾಶವಾಗುತ್ತದೆ. ಅವರಿಗಾಗಿಯೇ ಹಗಲಿರುಳು ದುಡಿಯುತ್ತಿರುವ ಅಮಿತ್ ಶಾ, ಪ್ರಧಾನಿ ಮೋದಿ ಮುಂತಾದವರೆಲ್ಲ ಸುಳ್ಳುಗಳ ಮುಳ್ಳಿನ ಟೋಪಿಯನ್ನು ಸಿದ್ಧಪಡಿಸಿಕೊಂಡು ಕನ್ನಡಿಗರ ತಲೆಗೆ ತೊಡಿಸಲು ತರುತ್ತಿದ್ದಾರೆ. ಬಿಜೆಪಿಯವರು ಸಿದ್ಧಪಡಿಸಿಕೊಂಡಿರುವ ವಿಷದ ಟೋಪಿಯಲ್ಲಿ ಹಿಂದೂ-ಮುಸ್ಲಿಂ ದ್ವೇಷ, ಭ್ರಷ್ಟಾಚಾರ, ಕುಟುಂಬ ರಾಜಕಾರಣವೆಂಬ ಮುಳ್ಳುಗಳೂ ಇರಲಿದ್ದು, ಜನರು ಎಚ್ಚರದಿಂದಿರಬೇಕು. ನಮ್ಮ ರೈತರ ಏಳಿಗೆಯಾಗಬೇಕಾಗಿದೆ. ಅದಕ್ಕಾಗಿ ಅವರ ಹಾಲಿಗೆ ಬೆಲೆ ಬೇಕು. ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು. ಅವರು ಬೆಳೆದಿದ್ದನ್ನು ಕೊಂಡುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

