ಧರ್ಮಸ್ಥಳ : ವೃದ್ಧೆಯ 10 ಲ.ರೂ. ಮೌಲ್ಯದ ಬಂಗಾರ ಕಳ್ಳತನ

ದೇವಸ್ಥಾನಕ್ಕೆ ಬಂದ ಮಹಿಳೆಗೆ ಅಮಲು ಬರಿಸುವ ಲಡ್ಡು, ಜ್ಯೂಸ್‌ ನೀಡಿ ಚಿನ್ನ ಎಗರಿಸಿದ ಖದೀಮ

ಬೆಳ್ತಂಗಡಿ : ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ವೃದ್ದೆಗೆ ಮತ್ತು ಬರುವ ಲಡ್ಡು ಮತ್ತು ಜ್ಯೂಸ್ ನೀಡಿ ಅಸ್ವಸ್ಥರನ್ನಾಗಿಸಿ ಹತ್ತು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಜೆ.ಪಿ.ನಗರ ನಿವಾಸಿಯಾಗಿರುವ ಪ್ರೇಮಾ ಕೆ (70) ಎಂಬವರು ಮೇ 23ರಂದು ಬೆಂಗಳೂರಿನಿಂದ ಉಡುಪಿಯ ಬ್ರಹ್ಮಾವರದಲ್ಲಿರುವ ತನ್ನ ಚಿಕ್ಕಮ್ಮನ ಮಗಳ ಮನೆಗೆ ಪೂಜಾ ಕಾರ್ಯಕ್ರಮಕ್ಕೆ ಬಂದವರು ಮೇ 25ರಂದು ಮಧ್ಯಾಹ್ನ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದರು. ದೇವರ ದರ್ಶನ ಮುಗಿಸಿ ರಾತ್ರಿ ವಾಪಾಸು ಊರಿಗೆ ಹೋಗುವ ಸಲುವಾಗಿ ರಾತ್ರಿ 9.45 ಗಂಟೆಗೆ ದೇವಸ್ಥಾನದ ಮುಖ್ಯ ದ್ವಾರದ ಮುಂಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದು ಅಲ್ಲಿದ್ದ ಕಬ್ಬಿಣದ ಬೆಂಚ್‌ನಲ್ಲಿ ಕುಳಿತುಕೊಂಡಿದ್ದಾಗ ಅಲ್ಲಿಯೇ ಪಕ್ಕದಲ್ಲಿ ಕುಳಿತ್ತಿದ್ದ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಅವರಲ್ಲಿಗೆ ಬಂದು ಪರಿಚಯಿಸಿಕೊಂಡು ಮಾತನಾಡಿದ್ದಾನೆ.





















































 
 

ನಾನು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಪ್ರಸಾದ ತೆಗೆದುಕೊಂಡು ಬಂದು ಇಲ್ಲಿ ದರ್ಶನ ಮಾಡಿ ಊಟ ಮಾಡಿ ಬಂದಿರುತ್ತೇನೆ ಎಂದು ಹೇಳಿ ಲಡ್ಡು ಪ್ರಸಾದ ಕೊಟ್ಟು ಬಳಿಕ ಜ್ಯೂಸ್‌ ಬಾಟಲಿಯಿಂದ ಜ್ಯೂಸ್‌ ಕುಡಿಯುವಂತೆ ಒತ್ತಾಯಿಸಿದಾಗ ಪ್ರೇಮ ಅವರು ಸ್ವಲ್ಪ ಜ್ಯೂಸ್‌ ಕುಡಿದು ವಾಪಾಸು ಕೊಟ್ಟಿದ್ದು ನಂತರ ರಾತ್ರಿ 10.15 ಗಂಟೆ ಸುಮಾರಿಗೆ ಆತನು ಪ್ರೇಮ ಅವರನ್ನು ದೇವಸ್ಥಾನದ ಮಹಾದ್ವಾರದ ಬಳಿ ಇರುವ ಕಟ್ಟೆಯ ಬಳಿ ಕರೆದುಕೊಂಡು ಹೋಗಿ ಕೂರಿಸಿದ್ದಾನೆ. ಈ ವೇಳೆ ಉಪಾಯವಾಗಿ ವೃದ್ದೆಯ ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಎಗರಿಸಿದ್ದಾನೆ. ಬಸ್‌ನಲ್ಲಿ ಸೀಟು ಇದೆಯ ಎಂದು ನೋಡಿ ಬರುತ್ತೇನೆ ಎಂದು ಹೇಳಿ ಚಿನ್ನಾಭರಣದೊಂದಿಗೆ ಹೋಗಿದ್ದಾನೆ. ಅಸ್ವಸ್ಥರಾಗಿದ್ದ ಪ್ರೇಮ ಅವರನ್ನು ಯಾರೋ ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅವರ ಕೊರಳಲ್ಲಿದ್ದ 80 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ಪರ್ಸಿನಲ್ಲಿದ್ದ ಸುಮಾರು 12 ಗ್ರಾಂ ತೂಕದ ಚಿನ್ನದ ಮುತ್ತಿನ ಸರ, ಸುಮಾರು 20 ಗ್ರಾಂ ತೂಕದ ಚಿನ್ನದ ಕೈಬಳೆ ಮತ್ತು ನಗದು 7000 ರೂಪಾಯಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ನಗದು ಸೇರಿ ಸುಮಾರು 10 ಲಕ್ಷ ರೂಪಾಯಿ ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರೇಮ ಅವರು ನೀಡಿ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೇ.26 ರಂದು BNS -307 ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಜ್ಯೂಸ್ ಕುಡಿದ ನೊಂದ ವೃದ್ಧೆ ಪ್ರೇಮ ಉಜಿರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೇ 27 ರಂದು ವಾಪಸ್ ಬೆಂಗಳೂರಿಗೆ ತೆರಳಿದ್ದಾರೆ.

error: Content is protected !!
Scroll to Top