ಸಂಪುಟ ಸಹೋದ್ಯೋಗಿಗಳ ಜೊತೆ ನಡೆದ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಭಾವುಕರಾಗಿ ನಿರ್ಧಾರ ಪ್ರಕಟಿಸಿದ ಸಿಎಂ
ಬೆಂಗಳೂರು: ಇಂದು ಮಧ್ಯಾಹ್ನ 3 ಗಂಟೆಗೆ ರಾಜೀನಾಮೆ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಲೋಕಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತೇನೆ. ರಾಜ್ಯಪಾಲರು ಇಲ್ಲದೇ ಇದ್ದರೆ ಅವರ ಕಾರ್ಯದರ್ಶಿಗೆ ರಾಜೀನಾಮೆ ನೀಡುವುದಾಗಿ ಸಿಎಂ ಮಾಹಿತಿ ನೀಡಿದ್ದಾರೆ. ನನಗೆ ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ವಿದಾಯದ ಬ್ರೇಕ್‌ಫಾಸ್ಟ್‌ನಲ್ಲಿ ನುಡಿದಿದ್ದಾರೆ.
ಮಂತ್ರಿಗಳ ಜೊತೆಗಿನ ಉಪಹಾರ ಸಭೆಯಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಹೇಳುವುವುದನ್ನು ಪಾಲನೆ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿ, ಈ ಹಿಂದೆ ನಡೆದ ಒಪ್ಪಂದ ಸೂತ್ರ ಬಿಚ್ಚಿಟ್ಟು ಸಂಪುಟ ಸಹೋದ್ಯೋಗಿಗಳ ಮುಂದೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು.
ಮುಂದಿನ ಸಿಎಂ ಯಾರು ಎಂಬ ಹೆಸರನ್ನ ಹೇಳದ ಸಿದ್ದರಾಮಯ್ಯ, ಮುಂದೆ ಯಾರು ಆಗುತ್ತಾರೆ ಎನ್ನುವುದನ್ನು ಹೈಕಮಾಂಡ್ ಹೇಳಲಿದೆ. ಹೈಕಮಾಂಡ್ ನಾಯಕರು ನಾವು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಅವರೇ ಎಲ್ಲ ಮುಂದಿನ ಪ್ರಕ್ರಿಯೆ ನಡೆಸುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯನವರು ಈ ರೀತಿ ಹೇಳುತ್ತಿದ್ದಂತೆ ಡಿಕೆ ಶಿವಕುಮಾರ್ ಕಣ್ಣಂಚಲಿ ನೀರು ಬಂದಿದೆ. ಸಿಎಂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಕ್ಕೆ ಡಿಕೆಶಿ ಭಾವುಕರಾದರು. ಬೆಳಗ್ಗೆ ಉಪಹಾರಕ್ಕೆ ಕಾವೇರಿ ನಿವಾಸಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯರನ್ನು ತಬ್ಬಿಕೊಂಡು ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಉಪಹಾರ ಸಭೆಗೂ ಮೊದಲು ಡಿಕೆಶಿ ಜೊತೆ ಮೊದಲು ಸಿಎಂ ಪ್ರತ್ಯೇಕ ಮಾತುಕತೆ ನಡೆಸಿದ್ದರು.
ಸದ್ಯ ರಾಜ್ಯಪಾಲರು ಬೆಂಗಳೂರಿನಲ್ಲಿ ಇಲ್ಲದೇ ಇರುವುದರಿಂದ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸಾಧ್ಯವೇ? ಅವರ ಮುಂದಿರುವ ಆಯ್ಕೆಗಳೇನು ಎಂಬ ಪ್ರಶ್ನೆಗಳು ಮೂಡಿವೆ. ರಾಜ್ಯಪಾಲರು ಲೋಕಭವನದಲ್ಲಿ ಇಲ್ಲದಿದ್ದರೂ ಗವರ್ನರ್ ವಿಶೇಷ ಕಾರ್ಯದರ್ಶಿ ಬಳಿ ರಾಜೀನಾಮೆ ಪತ್ರ ನೀಡಲು ಮುಖ್ಯಮಂತ್ರಿಗೆ ಸಾಂವಿಧಾನಿಕ ಅವಕಾಶ ಇದೆ. ಆದರೆ ಅಂಗೀಕಾರವಾಗಬೇಕಿದ್ದರೆ ರಾಜ್ಯಪಾಲರು ಬಂದೇ ಆಗಬೇಕು.
ಸಚಿವರ ಜೊತೆ ಸಿಎಂ ಸಿದ್ದರಾಮಯ್ಯರಿಂದ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಎನ್.ಎಸ್.ಬೋಸರಾಜು, ಡಾ.ಶರಣಪ್ರಕಾಶ್ ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್, ಜಾರ್ಜ್, ಭೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಎನ್.ಚಲುವರಾಯಸ್ವಾಮಿ, ಮಧುಬಂಗಾರಪ್ಪ, ಶಿವಾನಂದ ಪಾಟೀಲ್, ಕೆ.ಹೆಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ಕೆ..ಪಾಟೀಲ್, ಮಹದೇವಪ್ಪ, ಶಿವರಾಜ ತಂಗಡಗಿ, ದಿನೇಶ್ ಗುಂಡೂರಾವ್, ಶಾಸಕರಾದ ಪೊನ್ನಣ್ಣ, ರಾಯರೆಡ್ಡಿ, ಅಶೋಕ್ ಪಟ್ಟಣ್, ಪುಟ್ಟರಂಗಶೆಟ್ಟಿ ಸೇರಿ ಹಲವರು ಭಾಗಿಯಾಗಿದ್ದಾರೆ.
ಬೆಂಗಳೂರಿನ ಡಿಸಿಎಂ ಡಿಕೆ ಶಿವಕುಮಾರ್ ಅವರ ಖಾಸಗಿ ನಿವಾಸದ ಬಳಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ರಸ್ತೆಯಲ್ಲಿ ಹೆಚ್ಚುವರಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಪೊಲೀಸ್ ಕಬಡ್ಡಿ ಟೀಮ್ ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಕೂಡಾ ನಿಯೋಜಿಸಲಾಗಿದೆ. ಯಾವುದೇ ರೀತಿಯ ದುಡುಕಿನ ಹೇಳಿಕೆ ಬೇಡ ಎಂದು ಬೆಂಬಲಿಗರಿಗೆ ಡಿಕೆ ಶಿವಕುಮಾರ್ ಖಡಕ್ ಸೂಚನೆ ಕೊಟ್ಟಿದ್ದಾರೆ. ಹೈಕಮಾಂಡ್ ನಾಯಕರು ನನ್ನ ಜೊತೆಗೆ ಏನೂ ಮಾತನಾಡಿಲ್ಲ, ಎಲ್ಲವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತನಾಡಿದ್ದಾರೆ. ಸಿಎಂ ರಾಜೀನಾಮೆ ವಿಷಯವೂ ಗೊತ್ತಿಲ್ಲ ಎಂದು ತಮ್ಮನ್ನು ಭೇಟಿಯಾದ ಸಚಿವರು, ಶಾಸಕರಿಗೆಲ್ಲ ಡಿಕೆಶಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
























