ಹಮಾಸ್‌ನ ಇನ್ನೋರ್ವ ಮುಖಂಡನನ್ನು ವಾಯುದಾಳಿಯಲ್ಲಿ ಕೊಂದು ಹಾಕಿದ ಇಸ್ರೇಲ್‌

ಹೊಸದಾಗಿ ಆಯ್ಕೆಯಾಗಿದ್ದ ಹಮಾಸ್‌ ಮುಖಂಡನ ಇಡೀ ಕುಟುಂಬ ನಿರ್ನಾಮ

ಟೆಲ್ ಅವೀವ್: ಹೊಸದಾಗಿ ನೇಮಕಗೊಂಡಿದ್ದ ಹಮಾಸ್‌ ಮಿಲಿಟರಿ ನಾಯಕನನ್ನೂ ಇಸ್ರೇಲ್ ಸೇನೆ ವಾಯುದಾಳಿಯಲ್ಲಿ ಹೊಡೆದುರುಳಿಸಿದೆ. ಈ ಕುರಿತು ಸ್ವತಃ ಹಮಾಸ್ ಸ್ಪಷ್ಟನೆ ನೀಡಿದ್ದು, ಗಾಜಾದ ತನ್ನ ಹೊಸ ಸೈನಿಕ ನಾಯಕ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿರುವುದನ್ನು ಬುಧವಾರ ದೃಢಪಡಿಸಿದೆ. ತನ್ನ ಹಿಂದಿನ ನಾಯಕ ಸಾವನ್ನಪ್ಪಿದ ಎರಡು ವಾರಗಳೊಳಗೆ ಗಾಜಾ ನಗರದಲ್ಲಿ ನಡೆದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ತನ್ನ ಸೈನಿಕ ಘಟಕದ ಹೊಸ ನಾಯಕ ಕೂಡ ಮೃತಪಟ್ಟಿದ್ದಾನೆ ಎಂದು ಹಮಾಸ್ ತಿಳಿಸಿದೆ.

ಮಂಗಳವಾರ ನಡೆದ ವೈಮಾನಿಕ ದಾಳಿಯಲ್ಲಿ ಮೊಹಮ್ಮದ್ ಓದೇಹ್, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸಾವನ್ನಪ್ಪಿದ್ದಾನೆ ಎಂದು ಹಮಾಸ್ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲಿ ಸೇನೆ ಓದೇಹ್‌ನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದೆ ಎಂದು ಘೋಷಿಸಿದ್ದರು. ಸ್ಥಳೀಯ ಆಸ್ಪತ್ರೆಗಳ ಪ್ರಕಾರ ಮಂಗಳವಾರ ಗಾಜಾ ನಗರದ ಮಾರುಕಟ್ಟೆಯೊಂದರ ಮೇಲೆ ನಡೆದ ದಾಳಿಯಲ್ಲಿ ಓದೇಹ್ ಹಾಗೂ ಅವನ ಕುಟುಂಬ ಸದಸ್ಯರು ಸೇರಿದಂತೆ ಕನಿಷ್ಠ ಐವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ.





















































 
 

ಈ ದಾಳಿ ಪ್ರಮುಖ ಮುಸ್ಲಿಂ ಹಬ್ಬವಾದ ಈದ್ ಅಲ್-ಅಧಾ ಮುನ್ನಾ ದಿನ ನಡೆದಿದೆ. ಬುಧವಾರ ಗಾಜಾ ನಗರದಲ್ಲಿ ಓದೇಹ್ ಕುಟುಂಬದ ಅಂತ್ಯಕ್ರಿಯೆಗೆ ಸಾವಿರಾರು ಜನರು ಸೇರಿದ್ದರು. ಶೋಕಾಚರಣೆಯಲ್ಲಿ ಭಾಗವಹಿಸಿದವರು ನಾಲ್ಕು ಮೃತದೇಹಗಳನ್ನು ಹಸಿರು ಬಣ್ಣದ ಹಮಾಸ್ ಧ್ವಜಗಳಿಂದ ಮುಚ್ಚಿ, ಮಸೀದಿಯಿಂದ ನಗರದೆಲ್ಲೆಡೆ ಮೆರವಣಿಗೆ ನಡೆಸಿದರು.

ಗಾಜಾದಲ್ಲಿ ಸೂತಕದ ಈದ್

ಇಸ್ರೇಲ್‌ನ ಈ ದಾಳಿ ಮುಸ್ಲಿಮರು ಈದ್ ಅಲ್-ಅಧಾ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ನಡೆದಿದೆ. ಸಾಮಾನ್ಯವಾಗಿ ಕುಟುಂಬ ಸಮಾಗಮಗಳು ಮತ್ತು ಭರ್ಜರಿ ಊಟಗಳಿಂದ ಕೂಡಿರುವ ಈ ಹಬ್ಬ ಈ ವರ್ಷವೂ ಗಾಜಾದಲ್ಲಿ ಮಂಕಾಗಿದೆ. ಗಾಜಾದಲ್ಲಿ ಸೂತಕದ ನಡುವೆಯೇ ಈದ್ ಆಚರಿಸುವಂತಾಗಿದೆ. ವಿನಾಶಕಾರಿ ಯುದ್ಧದ ನಂತರ ಗಾಜಾದ ಬಹುತೇಕ ಜನರು ಇನ್ನೂ ಅತಂತ್ರ ಸ್ಥಿತಿಯಲ್ಲಿದ್ದು, ಗುಡಾರಗಳು ಅಥವಾ ತಾತ್ಕಾಲಿಕ ಆಶ್ರಯಗಳಲ್ಲಿ ವಾಸಿಸುತ್ತಿದ್ದಾರೆ.

ಗಾಜಾದ 20 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸುಮಾರು 90 ಶೇಕಡಾ ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಈಗ ಇಲಿಗಳ ಕಾಟ ಹಾಗೂ ಒಳಚರಂಡಿ ನೀರು ತುಂಬಿರುವ ದೊಡ್ಡ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಬದುಕು ಸಾಗಿಸಲು ಅವರು ನೆರವಿನ ಮೇಲೆಯೇ ಅವಲಂಬಿತರಾಗಿದ್ದಾರೆ.

error: Content is protected !!
Scroll to Top