ಆಟೋಮ್ಯಾಟಿಕ್ ಲಾಕಿಂಗ್ ಸಿಸ್ಟಮ್ ಆನ್ ಆಗಿ ಸಿಲುಕಿದ ಮಗು
ಬೆಳ್ತಂಗಡಿ: ಕಾರಿನ ಆಟೋಮ್ಯಾಟಿಕ್ ಲಾಕಿಂಗ್ ಸಿಸ್ಟಮ್ ಆನ್ ಆದ ಕಾರಣ ಮಗುವೊಂದು ಕಾರಿನೊಳಗೆ ಸಿಲುಕಿಕೊಂಡ ಆತಂಕಕಾರಿ ಘಟನೆ ನಡೆದಿದ್ದು, ಸಾರ್ವಜನಿಕರು ಸಮಯಪ್ರಜ್ಞೆಯಿಂದ ಮಗುವನ್ನು ಯಶಸ್ವಿಯಾಗಿ ರಕ್ಷಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮಡಂತ್ಯಾರಿನ ಮದ್ದಡ್ಕ ಎಂಬಲ್ಲಿ ಭಾನುವಾರ ನಡೆದಿದೆ.
ಚಾಲಕ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಸಮೀಪದ ಅಂಗಡಿಯೊಂದಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಆಟೋ-ಲಾಕ್ ವ್ಯವಸ್ಥೆಯು ಇದ್ದಕ್ಕಿದ್ದಂತೆ ಸಕ್ರಿಯಗೊಂಡಿದ್ದು, ಮಗು ಕಾರಿನೊಳಗೆ ಸಿಲುಕಿಕೊಂಡಿದೆ. ಮಗು ಕಾರಿನೊಳಗೆ ಲಾಕ್ ಆಗಿರುವುದನ್ನು ಕಂಡು ಸ್ಥಳೀಯರು ತಕ್ಷಣವೇ ಜಮಾಯಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಕಾರಿನ ಬಾಗಿಲು ತೆರೆಯಲು ಸತತ ಪ್ರಯತ್ನ ನಡೆಸಿದರೂ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಸಾರ್ವಜನಿಕರು ತಕ್ಷಣವೇ ಕಾರಿನ ಕಿಟಕಿಯ ಗಾಜನ್ನು ಒಡೆದು ಒಳಗೆ ಕೈಹಾಕಿ ಬಾಗಿಲು ತೆರೆದು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಘಟನೆ ವೇಳೆ ಮಗುವಿಗೆ ಯಾವುದೇ ಗಾಯಗಳಾಗದೆ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಮೂಲಕ ಕೆಲಕಾಲ ಸೃಷ್ಟಿಯಾಗಿದ್ದ ಆತಂಕದ ವಾತಾವರಣದಿಂದ ನಿಟ್ಟುಸಿರು ಬಿಡುವಂತಾಗಿದೆ.
























