ರೌಡಿ ಶೀಟರ್‌ ಆರೀಫ್ ಕೊಲೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ

ತೊಕ್ಕೊಟ್ಟು ಫ್ಲೈಓವರ್ ಮೇಲೆ ಬರ್ಬರವಾಗಿ ಕೊಲೆಯಾಗಿರುವ ಆರಿಫ್‌

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ರೌಡಿ ಶೀಟರ್‌ ಆರೀಫ್ ಹುಸೈನ್ ಅಲಿಯಾಸ್ ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

2026ರ ಮಾರ್ಚ್ 27ರಂದು ಮುಂಜಾನೆ ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೈಕ್‌ನಲ್ಲಿ ತೆರಳುತ್ತಿದ್ದ ಆರೀಫ್‌ನನ್ನು ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಡಿಕ್ಕಿ ಹೊಡೆದು ಕೆಡವಿದ ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ಕೃತ್ಯಕ್ಕೆ ಬಳಸಿದ್ದ ಕಾರನ್ನು ಬಂಟ್ವಾಳ ತಾಲೂಕಿನ ಬುಡೋಳಿ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು. ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಬಳಿಕ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.





















































 
 

ತನಿಖೆ ವೇಳೆ ಮಂಗಳೂರು ನಗರದ ಪಡೀಲ್ ಭಾಗದ ವಿಜಯನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮೊಹಮ್ಮದ್ ಇಬ್ರಾಹಿಂ ಸಿನಾನ್ ಅಲಿಯಾಸ್ ಚಿನ್ನು (21) ಎಂಬಾತನನ್ನು ಮೇ 25ರಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು 2026ರ ಫೆಬ್ರವರಿ ತಿಂಗಳಲ್ಲೇ ಆರೀಫ್ ಹುಸೈನ್ ಹತ್ಯೆಗೆ ಸಂಚು ರೂಪಿಸುವ ವೇಳೆ ಹಾಜರಿದ್ದ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಹಣಕಾಸಿನ ನೆರವು ನೀಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಈ ಹಿಂದೆ 2025ರಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ ಪ್ರಕರಣ ಹಾಗೂ 2024ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದು, ಒಟ್ಟು ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಆರೋಪಿ ಮೃತ ರೌಡಿಶೀಟರ್ ಟೊಪ್ಪಿ ನೌಫಾಲ್‌ನ ಸಹೋದರನಾಗಿದ್ದಾನೆ ಎಂದು ತಿಳಿದುಬಂದಿದೆ.

ಈ ಕೊಲೆ ಪ್ರಕರಣದಲ್ಲಿ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ತನಿಖೆ ಮುಂದುವರಿದಿದೆ.

error: Content is protected !!
Scroll to Top