ನಿಷೇಧಾಜ್ಞೆ, ಪೊಲೀಸರ ಸರ್ಪಗಾವಲಿನ ಮಧ್ಯೆ ಜನಜೀವನ
ಕಾರವಾರ: ಕೋಮು ಹಿಂಸಾಚಾರದ ಕರಾಳ ಇತಿಹಾಸ ಹೊಂದಿರುವ ಭಟ್ಕಳ ಮತ್ತೊಮ್ಮೆ ಪ್ರಕ್ಷುಬ್ಧಗೊಂಡಿದೆ. ಹಿಂದುಗಳ ಪವಿತ್ರ ಮೂರಿನಕಟ್ಟೆ ಧ್ವಂಸ ಮಾಡಿದ ಹಿನ್ನೆಲೆ ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದಿಮುಚ್ಚಿದ ಕೆಂಡಂದಂತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ಶಹರ ಹಾಗೂ ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಮದ್ಯದಂಗಡಿಗಳನ್ನು ಬಂದ್ ಮಾಡಲುಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ. ಗಲಾಟೆ ತಣ್ಣಗಾಗದ ಕಾರಣ 3 ದಿನಗಳ ಕಾಲ ಅಂದರೆ ಮೇ 25 ರಿಂದ ಮೇ 27ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ರಸ್ತೆ ಅಗಲೀಕರಣದ ವೇಳೆ ಇಲ್ಲಿನ ಮೂರಿನಕಟ್ಟೆಯನ್ನು ತೆರವುಗೊಳಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡ ಬಳಿಕ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯ ಅದೇ ಜಾಗದಲ್ಲಿ ಹಿಂದೂ ಕಾರ್ಯಕರ್ತರು ಕಟ್ಟೆಯನ್ನು ಮರು ನಿರ್ಮಾಣ ಮಾಡಿದ್ದರು. ಇದಕ್ಕೆ ಮುಸ್ಲಿಂ ಸಂಘಟನೆಗಳು ಹಾಗೂ ಮುಸ್ಲಿಂ ಸಮುದಾಯದ ಪ್ರಮುಖರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಕಟ್ಟೆಯನ್ನು ಪುನಃ ತೆರವುಗೊಳಿಸುವಂತೆ ಒತ್ತಾಯಿಸಿದ್ದರು.
ಅದಾದ ಬಳಿಕ ಭಾನುವಾರ ಮುಸ್ಲಿಂ ಸಮುದಾಯದ ನೂರಾರು ಜನ ಇದ್ದಕ್ಕಿದ್ದಂತೆ ಮೂರಿನಕಟ್ಟೆಯನ್ನು ಒಡೆದುರುಳಿಸಲು ಯತ್ನಿಸಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮುಸ್ಲಿಂ ಯುವಕರನ್ನು ತಡೆಯಲು ಯತ್ನಿಸಿದ್ದರು. ಈ ವೇಳೆ ಮುಸ್ಲಿಮರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು.
ಭಟ್ಕಳದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಐತಿಹಾಸಿಕ ಮೂರಿನಕಟ್ಟೆಗೆ ನೂರಾರು ವರ್ಷಗಳ ಇತಿಹಾಸವಿದೆ. ಭಟ್ಕಳದ ಈ ಮೂರಿನಕಟ್ಟೆಗೆ ಸುಪ್ರಸಿದ್ಧ ಶಿರಸಿ ಮತ್ತು ಸಾಗರದ ಮಾರಿಕಾಂಬಾ ದೇವಿಯ ಧಾರ್ಮಿಕ ಸಂಬಂಧವಿದೆ. ಸಾಗರದಿಂದ ಶಿರಸಿವರೆಗೆ ಮಾರಿಕಾಂಬಾ ದೇವಿಯ ‘ವಜ್ಜೆ’ (ದೇವಿಯ ನಿತ್ಯೋಪಯೋಗದ ವಸ್ತುಗಳು) ಇಡುವ ಪವಿತ್ರ ಸ್ಥಳಗಳಿದ್ದು, ಆ ಪೈಕಿ ಭಟ್ಕಳದ ಈ ಮೂರಿನಕಟ್ಟೆ ಕೂಡ ಒಂದಾಗಿದೆ.
ದೇವಿಯ ಈ ಪವಿತ್ರ ವಜ್ಜೆಯನ್ನು ಕಾಲಕಾಲಕ್ಕೆ ಒಂದೂರಿಂದ ಇನ್ನೊಂದು ಊರಿಗೆ, ಅಂದರೆ ಸಾಗರದಿಂದ ಶಿರಸಿವರೆಗೆ ಸ್ಥಳಾಂತರಿಸಲಾಗುತ್ತಿರುತ್ತದೆ. ಈ ಕಟ್ಟೆಯ ಮೇಲೆ ದೇವಿಯ ವಜ್ಜೆಯನ್ನಿಟ್ಟು ಭಕ್ತರು ಹರಕೆ ಕೇಳಿಕೊಂಡರೆ, ತಾಯಿ ಮಾರಿಕಾಂಬೆ ಅದನ್ನು ಈಡೇರಿಸುತ್ತಾಳೆ ಎಂಬ ಅಪಾರ ನಂಬಿಕೆ ಭಕ್ತರಲ್ಲಿದೆ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಹೆದ್ದಾರಿಗೆ ಅಡ್ಡಿಯಾಗುತ್ತಿದ್ದ ಈ ಕಟ್ಟೆಯನ್ನು ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ಅದರಂತೆ, ಮೂಲ ಮೂರಿನಕಟ್ಟೆಗೆ ಯಾವುದೇ ಧಕ್ಕೆ ಮಾಡದೆ, ಅದರ ಮೂಲಸ್ಥಾನದ ಪಕ್ಕದಲ್ಲೇ ಹೊಸದಾಗಿ ಮೂರಿನಕಟ್ಟೆ ನಿರ್ಮಿಸಲು ಇತ್ತೀಚೆಗೆ ಫೌಂಡೇಶನ್ ಹಾಕಲಾಗಿತ್ತು. ಆದರೆ ಈ ಹೊಸ ಫೌಂಡೇಶನ್ ಕಲ್ಲನ್ನು ಕಿತ್ತೆಸೆದಿರುವ ಮುಸ್ಲಿಂ ಸಮುದಾಯದ ಕೆಲವರು ಇಲ್ಲಿ ಕಟ್ಟೆ ನಿರ್ಮಾಣ ಮಾಡಬಾರದು ಎಂದು ಅಡ್ಡಿಪಡಿಸಿದ್ದಾರೆ. ಮುಸ್ಲಿಂ ಸಮುದಾಯದ ಈ ನಡೆಗೆ ಭಟ್ಕಳದ ಹಿಂದೂ ಮುಖಂಡರು ಹಾಗೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಭಟ್ಕಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
























