ರಾಜ್ಯಸಭೆ ಚುನಾವಣೆ : ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಆಕಾಂಕ್ಷಿ

ಪಕ್ಷ ಜವಾಬ್ದಾರಿ ಕೊಟ್ಟರೆ ನಿರ್ವಹಿಸಲು ರೆಡಿ ಎಂದ ಸದಾನಂದ ಗೌಡ

ಬೆಂಗಳೂರು: ರಾಜ್ಯಸಭೆಗೆ ನಾನು ಕೂಡ ಆಕಾಂಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಈ ಬಗ್ಗೆ ಪಕ್ಷದ ವರಿಷ್ಠರಿಗೆ ಈಗಾಗಲೇ ತಿಳಿಸಿದ್ದೇನೆ. ನಾನು ಈಗಾಗಲೇ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಿದ್ದೇನೆ. ಆದರೆ ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

ರಾಜ್ಯಸಭೆಗೆ ಹೋಗುವ ಆಸೆ ಇದೆ ಎಂಬುದನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದರು.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬದಲಾವಣೆ ಮಾಡುವುದನ್ನು ನಾವು ತೀರ್ಮಾನಿಸುವುದಿಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.





















































 
 

ಈಗಾಗಲೇ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರ ಅವಧಿ ಮುಗಿದ ಬಳಿಕ ಅಗತ್ಯವಿದ್ದರೆ ವರಿಷ್ಠರು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ ಎಂದು ಸದಾನಂದ ಗೌಡ ಸ್ಪಷ್ಟಪಡಿಸಿದರು.

16ನೇ ಲೋಕಸಭೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಮೊದಲ ಬಾರಿಗೆ 2014ರಲ್ಲಿ ಡಿವಿಎಸ್‌ ಸಂಸದರಾಗಿ ಆಯ್ಕೆಯಾದರು. 17ನೇ ಲೋಕಸಭೆಗೆ ಅದೇ ಕ್ಷೇತ್ರದಿಂದ ಕಾಂಗ್ರೆಸ್‌ನ ಕೃಷ್ಣಬೈರೇಗೌಡ ಅವರ ವಿರುದ್ಧ ಜಯಗಳಿಸಿ ಎರಡನೇ ಬಾರಿಗೆ ಸಂಸದರಾದರು. 2024ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು ಸ್ಪರ್ಧಿಸಿ ಗೆದ್ದಿದ್ದಾರೆ.

2011ರಿಂದ 2012ರವರೆಗೆ ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿದ್ದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ರೈಲ್ವೆ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ.

error: Content is protected !!
Scroll to Top