ಧುರಂಧರ್‌ ನಟ ರಣವೀರ್‌ ಸಿಂಗ್‌ಗೆ ಬಾಲಿವುಡ್‌ನಿಂದ ನಿಷೇಧ

ಅವರ ಜೊತೆ ಕೆಲಸ ಮಾಡದಿರಲು ಸಿನಿಮಾದವರ ನಿರ್ಧಾರ

ಮುಂಬೈ: ಧುರಂಧರ್‌ ಖ್ಯಾತಿಯ ಬಾಲಿವುಡ್‌ನ ಜನಪ್ರಿಯ ನಟ ರಣವೀರ್‌ ಸಿಂಗ್‌ಗೆ ಹಿಂದಿ ಚಿತ್ರರಂಗದಿಂದ ನಿಷೇಧ ಹೇರಲಾಗಿದೆ. ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ದಿಢೀರನೆ ಹೊರನಡೆದಿರುವ ಹಿನ್ನೆಲೆಯಲ್ಲಿ ಸಿನಿಮಾ ನೌಕರರ ಒಕ್ಕೂಟವು ನಟನ ವಿರುದ್ಧ ಅಸಹಕಾರ ತೋರಲು ನಿರ್ಧರಿಸಿದೆ. ಈ ಮೂಲಕ ಚಿತ್ರರಂಗದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಯಾರೂ ಸಹಕರಿಸದಂತೆ ಮತ್ತು ಕೆಲಸ ಮಾಡದಂತೆ ಸೂಚಿಸಿ ಪರೋಕ್ಷವಾಗಿ ಬ್ಯಾನ್ ಮಾಡಲಾಗಿದೆ. ಕಳೆದ ವಾರ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಸಿದ್ದ ಫೆಡರೇಶನ್ ಸೋಮವಾರ ಅಧಿಕೃತ ನಿರ್ಧಾರವನ್ನು ಪ್ರಕಟಿಸಿದೆ.

ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಒಡೆತನದ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ‘ಡಾನ್ 3’ ಸಿನಿಮಾ ಸಿದ್ಧವಾಗುತ್ತಿತ್ತು. ಶೂಟಿಂಗ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ರಣವೀರ್ ಸಿಂಗ್ ಈ ಚಿತ್ರದಿಂದ ಹೊರನಡೆದಿದ್ದಾರೆ. ಈ ದಿಢೀರ್ ನಿರ್ಧಾರದಿಂದ ನಿರ್ಮಾಣ ಸಂಸ್ಥೆಗೆ ಭಾರಿ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ಮತ್ತು ಪ್ರಮುಖ ಯೋಜನೆಗಳಿಗಾಗಿ ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿತ್ತು.





















































 
 

ಒಕ್ಕೂಟದ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ‘ಚಿತ್ರೀಕರಣಕ್ಕೆ ಕೆಲವೇ ದಿನಗಳಿರುವಾಗ ನಟರು ಈ ರೀತಿ ಸಿನಿಮಾದಿಂದ ಹೊರನಡೆಯುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದು ಸರಿಯಲ್ಲ’ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೌಕರರ ಒಕ್ಕೂಟದ ಅಧ್ಯಕ್ಷ ಬಿ.ಎನ್ ತಿವಾರಿ, ಮುಖ್ಯ ಸಲಹೆಗಾರ ಅಶೋಕ್ ಪಂಡಿತ್, ಪ್ರಧಾನ ಕಾರ್ಯದರ್ಶಿ ಅಶೋಕ್ ದುಬೆ ಮತ್ತು ಖಜಾಂಚಿ ಗಂಗೇಶ್ವರಲಾಲ್ ಶ್ರೀವಾಸ್ತವ್ ಅವರನ್ನೊಳಗೊಂಡ ಉನ್ನತ ಮಟ್ಟದ ಆಂತರಿಕ ಸಭೆಯ ನಂತರ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದಕ್ಕೂ ಮುನ್ನ ಈ ವಿವಾದವು ನಿರ್ಮಾಪಕರ ಸಂಘದ ಮೆಟ್ಟಿಲೇರಿತ್ತು. ಅಲ್ಲಿ ಹಿರಿಯ ನಿರ್ಮಾಪಕರು ರಣವೀರ್ ಸಿಂಗ್ ಹಾಗೂ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ನಡುವೆ ರಾಜಿ ಸಂಧಾನ ಮಾಡಲು ಪ್ರಯತ್ನಿಸಿದ್ದರು. ಆದರೆ, ನಷ್ಟ ಪರಿಹಾರ ಹಾಗೂ ಸೆಟಲ್ಮೆಂಟ್ ಕುರಿತ ಮಾತುಕತೆಗಳು ಸಫಲವಾಗದ ಕಾರಣ ಈಗ ಫೆಡರೇಶನ್ ಕಠಿಣ ಕ್ರಮಕ್ಕೆ ಮುಂದಾಗಿದೆ.

ಈ ಬ್ಯಾನ್ ಆದೇಶವು ರಣವೀರ್ ಸಿಂಗ್ ಅವರ ಮುಂಬರುವ ಇತರ ಸಿನಿಮಾಗಳ ಮೇಲೂ ಪರಿಣಾಮ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ‘ಧುರಂಧರ್’ ಯಶಸ್ಸಿನ ನಂತರ ರಣವೀರ್ ಸಿಂಗ್ ಅವರಿಗೆ ಬೇಡಿಕೆ ಹೆಚ್ಚಿದೆ. ಅದರ ನಡುವೆಯೂ ಅವರು ಬ್ಯಾನ್ ಆಗಿರುವುದರಿಂದ ವೃತ್ತಿಜೀವನಕ್ಕೆ ಸವಾಲಾಗಿದೆ. ಧುರಂಧರ್‌ ಬಾಲಿವುಡ್‌ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಿಟ್‌ ಚಿತ್ರವಾಗಿದೆ. ಎರಡೂ ಭಾಗಗಳು ಸೂಪರ್‌ ಹಿಟ್‌ ಆದ ಬಳಿಕ ರಣವೀರ್‌ ಸಿಂಗ್‌ ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇಂಥ ಚಿತ್ರದಲ್ಲಿ ನಟಿಸಿದ ಬಳಿಕ ಸಣ್ಣ ಬ್ಯಾನರ್‌ಗಳ ಚಿತ್ರಗಳಲ್ಲಿ ನಟಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top