ಕಪ್ಪೆಚಿಪ್ಪು ಹೆಕ್ಕುವಾಗ ನೀರುಪಾಲು : ಮೃತರ ಸಂಖ್ಯೆ 11ಕ್ಕೇರಿಕೆ

ಭಟ್ಕಳದ ತಟ್ಟೆಹಕ್ಲು ನದಿಗೆ ಕಪ್ಪೆಚಿಪ್ಪು ಹೆಕ್ಕಲು ಇಳಿದವರು ಜಲಸಮಾಧಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಅಳ್ವೆಕೋಡಿ ಕಡಲತೀರ ಪ್ರದೇಶದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 11 ಜನರ ಪೈಕಿ ನಿನ್ನೆ 10 ಜನರ ಮೃತದೇಹಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಕೂಡ ಇಂದು ಪತ್ತೆಯಾಗಿದೆ. ಎನ್‌ಡಿಆರ್‌ಎಫ್‌, ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ಪತ್ತೆ ಮಾಡಿ ಹೊರತೆಗೆಯಲಾಗಿದೆ. ಆ ಮೂಲಕ ನೀರಿನ ಅಬ್ಬರಕ್ಕೆ 11 ಮಂದಿ ಜಲ ಸಮಾಧಿಯಾಗಿದ್ದರೆ, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.

ಮೃತರ ಪೈಕಿ ಮಾಸ್ತಮ್ಮ ನಾಯ್ಕ್ ಅವರನ್ನು ಉಳಿಸಲು ಹೋಗಿ ಅವರ ಮಗ ಉಮೇಶ್​​ ನಾಯ್ಕ್​​ ಕೂಡ ನೀರುಪಾಲಾಗಿದ್ದಾರೆ. ತಾಯಿ ನೀರಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದರೆ ಮಗ ಉಮೇಶ್​​, ಬಂಡೆ ಮೇಲೆ ಕಪ್ಪುಚಿಪ್ಪು ಹೆಕ್ಕುತ್ತಿದ್ದರು. ತಾಯಿ ನೀರಲ್ಲಿ ಮುಳುಗುತ್ತಿದ್ದಿದ್ದು ಕಂಡಿದ್ದೇ ತಡ ಆಕೆಯ ರಕ್ಷಣೆಗೆಂದು ಅವರು ಕೂಡ ನೀರಿಗೆ ಹಾರಿದ್ದರು. ತಾಯಿ ದಪ್ಪ ಇದ್ದಿದ್ದರಿಂದ ಆಕೆಯನ್ನು ಎಷ್ಟೇ ಎಳೆಯಲು ಪ್ರಯತ್ನಿಸಿದರೂ ಬದುಕಿಸಲು ಸಾಧ್ಯವಾಗಿಲ್ಲ. ಹೀಗಾಗಿ ನೀರಿಂದ ಆತ ಹಿಂದಿರುಗುವ ವೇಳೆ ಮತ್ತಿಬ್ಬರು ತಮ್ಮ ರಕ್ಷಣೆಗಾಗಿ ಉಮೇಶ್​​ ಕಾಲು ಎಳೆದಿದ್ದಾರೆ. ಹೀಗಾಗಿ ಅವರೂ ನೀರಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಪ್ರತ್ಯಕ್ಷದರ್ಶಿ ಮಂಜುನಾಥ್ ನಾಯ್ಕ್ ತಿಳಿಸಿದ್ದಾರೆ.





















































 
 

ಕಪ್ಪೆಚಿಪ್ಪು ಹೆಕ್ಕಲು ಹೋಗಿ ನೀರುಪಾಲಾದವರ ಪೈಕಿ ಒಂದೊಂದು ಕುಟುಂಬಗಳ ಕಥೆಯೂ ಮನಕಲಕುವಂತಿದೆ. ಅವಘಡದಲ್ಲಿ ಮಾದೇವ ನಾಯ್ಕ್ ಮತ್ತು ಲಕ್ಷ್ಮಿ ನಾಯ್ಕ್ ದಂಪತಿ ಅಸುನೀಗಿದ್ದು, ತಂದೆ ತಾಯಿ ಇಬ್ಬರೂ ನೀರುಪಾಲಾದ ಹಿನ್ನೆಲೆ ಮಕ್ಕಳಾದ ದರ್ಶನ (23), ಕಿರ್ತನಾ(20) ಈಗ ಅನಾಥರಾಗಿದ್ದಾರೆ. ಮತ್ತೊಂದೆಡೆ ಅವಘಡದಲ್ಲಿ ಮೃತ ಲಕ್ಷ್ಮೀ ಶಿವರಾಮ ನಾಯ್ಕ್​​ ಅವರ ಪತಿ ಕೂಡ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಓದುತ್ತಿದ್ದ ನಾಲ್ವರು ಮಕ್ಕಳಿಗೆ ಅಮ್ಮನೇ ಅಧಾರವಾಗಿದ್ದರು. ಆದರೀಗ ಆಕೆಯೂ ಮೃತಪಟ್ಟಿರುವುದು ಮಕ್ಕಳಿಗೆ ದಿಕ್ಕು ತೋಚದಂತೆ ಮಾಡಿದೆ.

ಭಟ್ಕಳದ ತಟ್ಟೆ ಹಕ್ಕಲು ನದಿಯಲ್ಲಿ ಈ ಘನಘೋರ ದುರಂತ ಭಾನುವಾರ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರು ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ತಟ್ಟೆಹಕಲ್ಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಪಡುಶಿರಾಲಿ ಶಾರದಹೊಳೆಯ 14 ಜನ ನದಿಗೆ ಇಳಿದಿದ್ದರು. 12 ಮಂದಿ ಮಹಿಳೆಯರು, ಇಬ್ಬರು ಪುರುಷರು ಕಪ್ಪೆಚಿಪ್ಪುಗಳನ್ನು ತೆಗೆಯುತ್ತಿದ್ದರು. ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಒಂದಷ್ಟು ಕಪ್ಪೆಚಿಪ್ಪುಗಳನ್ನ ಹಾಯ್ದು ನದಿ ತಟದಲ್ಲಿ ಇರಿಸಿದ್ದರು. ತಣ್ಣಗೆ ಹರಿಯುತ್ತಿದ್ದ ನದಿ ಒಡಲಿನಲ್ಲಿ, ಏಕಾಏಕಿ ನೀರಿನ ಹರಿವು ಹೆಚ್ಚಾಗಿದ್ದು ನದಿಗೆ ಇಳಿದವರು ಕೊಚ್ಚಿಕೊಂಡು ಹೋಗಿದ್ದಾರೆ. ಒಟ್ಟು 14 ಜನರ ಪೈಕಿ 11 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಪುರುಷ ಸೇರಿ 9 ಮಹಿಳೆಯರು ಸಾವಿಗೀಡಾಗಿದ್ದು, ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಒಬ್ಬರಿಗಾಗಿ ತೀವ್ರ ಶೋಧ ಮುಂದುವರಿದಿದೆ.

ಇವರೆಲ್ಲ ಭಾನುವಾರದ ರಜಾದಿನ ಮನೆಯಲ್ಲಿ ಮಾಂಸದಡುಗೆ ಮಾಡುವ ಉದ್ದೇಶದಿಂದ ಕಟ್ಟೆಚಿಪ್ಪು ಹೆಕ್ಕಲು ನದಿಗಿಳಿದಿದ್ದರು. ಕಪ್ಪೆಚಿಪ್ಪು ಹೆಕ್ಕುವುದು ಔ ಭಾಗದಲ್ಲಿ ಮಾಮೂಲು ಸಂಗತಿಯಾಗಿದ್ದರೂ ಇವರು ವೃತ್ತಿಪರವಾಗಿ ಆ ಕೆಲಸ ಮಾಡುತ್ತಿದ್ದವರು. ನಿತ್ಯ ಕಪ್ಪೆಚಿಪ್ಪು ಹೆಕ್ಕುವವರಿಗೆ ನದಿಯ ಹರಿವಿನಲ್ಲಾಗುವ ಬದಲಾವಣೆಯ ಅರಿವು ಇರುತ್ತದೆ. ಸಮುದ್ರ ಉಕ್ಕೇರಿದಾಗ ನದಿಯ ನೀರಿನ ಮಟ್ಟ ಏಕಾಏಕಿ ಹೆಚ್ಚಾದ್ದೇ ಭಾನುವಾರದ ಭೀಕರ ದುರಂತಕ್ಕೆ ಕಾರಣ ಎನ್ನಲಾಗಿದೆ. ದಿಢೀರ್‌ ನೀರು ಹೆಚ್ಚಾದಗ ದಡಕ್ಕೆ ಧಾವಿಸುತ್ತಿದ್ದವರಿಗೆ ತಾವು ಸುಳಿ ಮತ್ತು ಆಳ ಇರುವ ಕಡೆ ಹೋಗುತ್ತಿರುವ ಸಂಗತಿ ಗೊತ್ತಾಗಲಿಲ್ಲ. ಅದೇ ಅವರ ಪಾಲಿಗೆ ಮೃತ್ಯುವಾಯಿತು.

error: Content is protected !!
Scroll to Top