ಮಹಾಬಲೇಶ್ವರ ಘಾಟಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತ
ಮುಂಬೈ : ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಬಲೇಶ್ವರ-ಪೋಲಾದ್‌ಪುರ ರಸ್ತೆಯಲ್ಲಿ ಭಾನುವಾರ ತಡರಾತ್ರಿ ಕಾರು ಕಂದಕಕ್ಕೆ ಉರುಳಿಬಿದ್ದ ಪರಿಣಾಮ 8 ಯುವಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರು ಆಳವಾದ ಕಂದಕಕ್ಕೆ ಉರುಳಿದೆ. ಅಂಬೆನಾಲಿ ಘಾಟ್ ಬಳಿ ಈ ಅಪಘಾತ ಸಂಭವಿಸಿದೆ. ಸ್ಥಳೀಯರು ಈ ಕಂದಕವು ಸುಮಾರು 1,000 ಅಡಿ ಆಳದಲ್ಲಿದೆ ಎಂದು ಅಂದಾಜಿಸಿದ್ದಾರೆ. ಇಲ್ಲಿಯವರೆಗೆ ಎರಡು ಶವಗಳನ್ನು ಹೊರತೆಗೆಯಲಾಗಿದೆ.
ಸೋಮವಾರ ಮುಂಜಾನೆ ಕಂದಕದಲ್ಲಿ ಅಪಘಾತಕ್ಕೀಡಾದ ವಾಹನ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರನ್ನು ಸತಾರಾ ನಿವಾಸಿಗಳಾದ ರಿತೇಶ್ ಲೋಖಂಡೆ (22), ಸುಹಾಸ್ ಲೋಖಂಡೆ (20), ಉತ್ಕರ್ಷ್ ಶಿಂಗ್ಟೆ (21), ನಿಖಿಲ್ ಶಿಂಗ್ಟೆ (25), ಮಹೇಶ್ ಪವಾರ್ (25), ಆದಿತ್ಯ ಸಾಳುಂಖೆ (21), ರಾಜೇಶ್ ಕಟ್ಕರ್ (35) ಮತ್ತು ರತ್ನಗಿರಿಯ ಅಂಶ್ ಚವಾಣ್ (19) ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ಭಾನುವಾರ ತಡರಾತ್ರಿ ಸುಮಾರು 2 ಗಂಟೆಗೆ ದಾಪೋಲಿಯ ಹರ್ನೆಯಿಂದ ಸ್ಕಾರ್ಪೊಯೊ ಕಾರಿನಲ್ಲಿ ಹೊರಟಿದ್ದರು. ಆದರೆ, ಅವರು ನಿಗದಿತ ಸಮಯಕ್ಕೆ ಸತಾರಾ ತಲುಪದಿದ್ದಾಗ ಆತಂಕಗೊಂಡ ಸಂಬಂಧಿಕರು ಸೋಮವಾರ ಮಧ್ಯಾಹ್ನ ಹುಡುಕಾಟ ಆರಂಭಿಸಿ ಬಳಿಕ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಮೃತರ ಕೊನೆಯ ಮೊಬೈಲ್ ನೆಟ್‌ವರ್ಕ್ ಲೊಕೇಶನ್ ಪೋಲಾದ್‌ಪುರ ಸಮೀಪದ ಮೊಬೈಲ್ ಟವರ್ ಮೂಲಕ ಪತ್ತೆಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಜಂಟಿ ಶೋಧ ಕಾರ್ಯ ಕೈಗೊಂಡಾಗ, ಸೋಮವಾರ ಮುಂಜಾನೆ ಸುಮಾರು 1000 ಅಡಿ ಆಳದ ಕಂದಕದಲ್ಲಿ ಕಾರು ಬಿದ್ದಿರುವುದು ಪತ್ತೆಯಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಸ್ಥಳೀಯ ವಿಪತ್ತು ನಿರ್ವಹಣಾ ತಂಡದ ನೆರವಿನೊಂದಿಗೆ ಪೊಲೀಸರು ಎರಡು ಶವಗಳನ್ನು ಹೊರತೆಗೆದಿದ್ದು, ಇನ್ನು ಮೂರು ಶವಗಳನ್ನು ಪತ್ತೆ ಹಚ್ಚಲಾಗಿದೆ. ಉಳಿದವರಿಗಾಗಿ ಕಂದಕದಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
























