ಸ್ಪೀಕರ್ ಯು.ಟಿ.ಖಾದರ್ ಶಿಫಾರಸ್ಸಿನ ಮೇರೆಗೆ ಕೇಸ್ ಹಿಂಪಡೆದ ಸರ್ಕಾರ
ಬೆಂಗಳೂರು: ರಾಜ್ಯ ಸರ್ಕಾರ ಕಲಬುರಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ ಪಡೆಯಲು ನಿರ್ಧರಿಸಿ ಮತ್ತೆ ಅಲ್ಪಸಂಖ್ಯಾತರನ್ನು ಓಲೈಸಲು ಮುಂದಾಗಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 52 ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ಬಿಜೆಪಿ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದೆ.
ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಮನವಿ ಮೇರೆಗೆ ಈ ಕೇಸ್ ವಾಪಸ್ ಪಡೆದುಕೊಂಡಿದೆ. ಈ ಮೂಲಕ ಮುಸ್ಲಿಂ ಯುವಕರು ಹಾಗೂ ಕೆಲ ಮುಖಂಡರಿಗೆ ಬಿಗ್ ರಿಲೀಫ್ ಸಿಕ್ಕಿದೆ.
2022ರ ಶಿವರಾತ್ರಿಯಂದು ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗದ ಪೂಜೆಯ ಸಂದರ್ಭದಲ್ಲಿ ದೊಡ್ಡ ಗಲಾಟೆಯಾಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಕಿಡಿಗೇಡಿಗಳು ರಾಘವ ಚೈತನ್ಯ ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದರು.
ಬಳಿಕ ಅದನ್ನ ಸ್ವಚ್ಛಗೊಳಿಸಿ ಪೂಜೆಗೆ ಅಂತ ತೆರಳಿದ್ದ ಅಂದಿನ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಹಾಗು ಡಿಸಿ, ಎಸ್ಪಿ ಕಾರಿನ ಮೇಲೆ ಬಡಿಗೆಗಳಿಂದ ಹೊಡೆದು ಕಲ್ಲು ತೂರಾಟ ಮಾಡಿ ಮಾರಕಾಸ್ತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು. ಈ ಗಲಾಟೆ ಪ್ರಕರಣ ಸಂಬಂಧ ವಿವಿದ ಮುಸ್ಲಿಂ ಮುಖಂಡರು ಹಾಗೂ ಯುವಕರ ವಿರುದ್ಧ ದಾಖಲಾಗಿದ್ದ ಒಟ್ಟು 13 ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಇದರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
























