ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಎರಡು ಉಪಚುನಾವಣೆ
ನವದೆಹಲಿ: 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಜೂನ್ 18ರಂದು 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಜೊತೆಗೆ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಎರಡು ಉಪಚುನಾವಣೆಗಳನ್ನೂ ನಡೆಸಲಾಗುವುದು ಎಂದು ತಿಳಿಸಿದೆ.
ಭಾರತೀಯ ಚುನಾವಣಾ ಆಯೋಗವು ಇಂದು ಶುಕ್ರವಾರ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಿಸಿದ್ದು, ಜೂನ್ 18ರಂದು ಮತದಾನ ನಡೆಯಲಿದೆ ಎಂದು ತಿಳಿಸಿದೆ.
ಪ್ರಸ್ತುತ ರಾಜ್ಯಸಭಾ ಸದಸ್ಯರ ಅವಧಿ ಜೂನ್ 21ರಿಂದ ಜುಲೈ 19ರ ನಡುವೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಸ್ಥಾನಗಳು ಖಾಲಿಯಾಗಲಿವೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಆಂಧ್ರಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ ನಾಲ್ಕು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜಾರ್ಖಂಡ್ನಲ್ಲಿ ಎರಡು ರಾಜ್ಯಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳಲ್ಲಿ ತಲಾ ಒಂದು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನಾಂಕ ಎಂದು ಚುನಾವಣಾ ಆಯೋಗ ತಿಳಿಸಿದೆ.
























