ಕಾರ್ಮಿಕರನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಂದ ಬಂದೂಕುಧಾರಿಗಳು
ವಾಷಿಂಗ್ಟನ್ : ಅಂತಾರಾಷ್ಟ್ರೀಯ ಮಾದಕವಸ್ತು ಜಾಲ ಹಾಗೂ ಗ್ಯಾಂಗ್ವಾರ್ಗಳಿಂದ ಸದಾ ಸುದ್ದಿಯಲ್ಲಿರುವ ಹೊಂಡುರಾಸ್ ಕರಾವಳಿ ಪ್ರದೇಶದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಎರಡು ಪ್ರತ್ಯೇಕ ಘಟನೆಯಲ್ಲಿ 6 ಮಂದಿ ಪೊಲೀಸರು ಸೇರಿ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೊಂಡುರಾಸ್ ಎಂಬುದು ಮಧ್ಯ ಅಮೆರಿಕದಲ್ಲಿರುವ ಮತ್ತೊಂದು ದೇಶವಾಗಿದೆ.
ಮೊದಲ ಆಘಾತಕಾರಿ ಘಟನೆ ಉತ್ತರ ಹೊಂಡುರಾಸ್‌ನ ಟ್ರುಜಿಲ್ಲೊದಲ್ಲಿ ನಡೆದಿದೆ. ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಹಕ್ಕುಗಳಿಗಾಗಿ ದಶಕಗಳಿಂದ ಸಂಘರ್ಷ ನಡೆಯುತ್ತಿರುವ ಈ ಪ್ರದೇಶದಲ್ಲಿ ಬಂದೂಕುಧಾರಿಗಳು ಏಕಾಏಕಿ ನುಗ್ಗಿ ಕನಿಷ್ಠ 19 ಕಾರ್ಮಿಕರನ್ನು ಅತ್ಯಂತ ಕ್ರೂರವಾಗಿ ಗುಂಡಿಕ್ಕಿ ಕೊಂದಿದ್ದಾರೆ. ಈ ಪ್ರದೇಶದಲ್ಲಿ ಪರಿಸರವಾದಿಗಳಿಗೆ ಹಾಗೂ ಕೃಷಿ ಕಾರ್ಮಿಕರಿಗೆ ನಿರಂತರವಾಗಿ ಜೀವ ಬೆದರಿಕೆ ಇತ್ತು. 2024ರಲ್ಲೂ ಇಲ್ಲಿ ಪ್ರಮುಖ ಪರಿಸರ ನಾಯಕ ಜುವಾನ್ ಲೋಪೆಜ್ ಎಂಬುವವರನ್ನು ಹತ್ಯೆ ಮಾಡಲಾಗಿತ್ತು.
ಮೊದಲ ಘಟನೆಯ ಬೆನ್ನಲ್ಲೇ ಗ್ವಾಟೆಮಾಲಾ ಗಡಿಯ ಸಮೀಪವಿರುವ ಓಮೋವಾದಲ್ಲಿ ಎರಡನೇ ಭೀಕರ ದಾಳಿ ನಡೆದಿದೆ. ಗ್ಯಾಂಗ್ ವಿರೋಧಿ ವಿಶೇಷ ಕಾರ್ಯಾಚರಣೆಗೆ ನಿಯೋಜನೆಗೊಂಡು ರಾಜಧಾನಿಯಿಂದ ಪ್ರಯಾಣಿಸುತ್ತಿದ್ದ ಪೊಲೀಸ್ ವಾಹನದ ಮೇಲೆ ಅಪರಾಧಿಗಳು ಸಂಚು ರೂಪಿಸಿ ಗುಂಡಿನ ಮಳೆ ಕರೆದಿದ್ದಾರೆ. ಈ ಭೀಕರ ದಾಳಿಯಲ್ಲಿ ಒಬ್ಬ ಹಿರಿಯ ಅಧಿಕಾರಿ ಸೇರಿದಂತೆ ಆರು ಜನ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
























