ಪೊಲೀಸರ ಪ್ರತಿದಾಳಿಗೆ ಆಕ್ರಮಣಕಾರರಿಬ್ಬರು ಬಲಿ
ವಾಷಿಂಗ್ಟನ್ : ಅಮೆರಿಕದ ಸ್ಯಾನ್ ಡಿಯಾಗೋದಲ್ಲಿರುವ ಇಸ್ಲಾಮಿಕ್ ಸೆಂಟರ್ ಮಸೀದಿಯೊಳಗೆ ಭೀಕರ ಗುಂಡಿನ ದಾಳಿ ನಡೆದಿದೆ. ಇಬ್ಬರು ಮಸೀದಿಗೆ ನುಗ್ಗಿ ಗುಂಡಿನ ಸುರಿಮಳೆಗೈದಿದ್ದಾರೆ. ಮಸೀದಿಯ ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರು ಅಮಾಯಕರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಪೊಲೀಸರು ನಡೆಸಿದ ತಕ್ಷಣದ ಪ್ರತಿದಾಳಿಯಲ್ಲಿ ಇಬ್ಬರು ಶೂಟರ್ಗಳೂ ಸಹ ಸಾವನ್ನಪ್ಪಿದ್ದಾರೆ ಎಂದು ಸ್ಯಾನ್ ಡಿಯಾಗೋ ಪೊಲೀಸ್ ಮುಖ್ಯಸ್ಥ ಸ್ಕಾಟ್ ವಾಲ್ ತಿಳಿಸಿದ್ದಾರೆ.
ಈ ಇಸ್ಲಾಮಿಕ್ ಕೇಂದ್ರವು ಸ್ಯಾನ್ ಡಿಯಾಗೋ ಕೌಂಟಿಯಲ್ಲೇ ಅತ್ಯಂತ ದೊಡ್ಡ ಮಸೀದಿಯಾಗಿದ್ದು, ಇಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಅರೇಬಿಕ್ ಭಾಷೆ, ಇಸ್ಲಾಮಿಕ್ ಅಧ್ಯಯನಗಳು ಮತ್ತು ಕುರಾನ್ ಬೋಧನೆ ಮಾಡುವ ‘ಅಲ್ ರಶೀದ್’ ಶಾಲೆ ಕೂಡ ಇದೆ. ಗುಂಡಿನ ದಾಳಿ ನಡೆದ ತಕ್ಷಣ ಇಡೀ ಪ್ರದೇಶವನ್ನು ಹತ್ತಾರು ಪೊಲೀಸ್ ವಾಹನಗಳು ಸುತ್ತುವರಿದವು. ಮಸೀದಿಯ ಪಾರ್ಕಿಂಗ್ ಸ್ಥಳದಿಂದ ಡಜನ್ಗಿಂತಲೂ ಹೆಚ್ಚು ಪುಟ್ಟ ಮಕ್ಕಳು ಪ್ರಾಣಭಯದಿಂದ ಪರಸ್ಪರ ಕೈ ಕೈ ಹಿಡಿದುಕೊಂಡು ಸುರಕ್ಷಿತವಾಗಿ ಹೊರಗೆ ಬರುತ್ತಿರುವ ದೃಶ್ಯಗಳು ಹೆಲಿಕಾಪ್ಟರ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಸೀದಿಯ ಇಮಾಮ್ ತಹಾ ಹಸಾನೆ, ಈ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನಮ್ಮ ಕೇಂದ್ರವು ಸದಾ ಅಂತರ್ಧರ್ಮೀಯ ಸೌಹಾರ್ದ ಮತ್ತು ಸಮುದಾಯ ನಿರ್ಮಾಣದ ಮೇಲೆ ಕೆಲಸ ಮಾಡುತ್ತದೆ. ಇಸ್ಲಾಂ ಧರ್ಮದ ಬಗ್ಗೆ ತಿಳಿದುಕೊಳ್ಳಲು ಮುಸ್ಲಿಮೇತರರ ದೊಡ್ಡ ಗುಂಪೊಂದು ಮುಂಜಾನೆ ಮಸೀದಿಗೆ ಬಂದಿತ್ತು. ಅಂತಹ ಶಾಂತಿ ಬಯಸುವ ಜಾಗದಲ್ಲಿ ಈ ರಕ್ತಪಾತ ನಡೆದಿದೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಪೊಲೀಸ್ ಮುಖ್ಯಸ್ಥ ಸ್ಕಾಟ್ ವಾಲ್ ಮಾತನಾಡಿ, ಪ್ರಾಥಮಿಕ ಸಾಕ್ಷ್ಯಗಳ ಆಧಾರದ ಮೇಲೆ ಇದನ್ನು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿದ ‘ದ್ವೇಷಾಪರಾಧ’ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಆದರೆ ದಾಳಿ ನಡೆಸಿದ ಹದಿಹರೆಯದ ಶೂಟರ್ಗಳು ಯಾರು ಮತ್ತು ಅವರ ಹಿನ್ನೆಲೆ ಏನು ಎಂಬ ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ ಎಂದಿದ್ದಾರೆ.
ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಅವರ ಕಚೇರಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿದೆ. “ಸಮುದಾಯವನ್ನು ರಕ್ಷಿಸಲು ಜೀವದ ಹಂಗು ತೊರೆದು ತಕ್ಷಣ ಸ್ಪಂದಿಸಿದ ರಕ್ಷಣಾ ಸಿಬ್ಬಂದಿಗೆ ಧನ್ಯವಾದಗಳು. ಸಾರ್ವಜನಿಕರು ಸ್ಥಳೀಯ ಅಧಿಕಾರಿಗಳ ಮಾರ್ಗದರ್ಶನವನ್ನು ಅನುಸರಿಸಬೇಕು” ಎಂದು ಗವರ್ನರ್ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
























