ಜನರನ್ನು ಕಂಗಾಲಾಗಿಸಿದ ಪೆಟ್ರೋಲು, ಡೀಸೆಲ್‌ ಬೆಲೆ ಏರಿಕೆ

ಕರ್ನಾಟಕದಲ್ಲಿ ಪೆಟ್ರೋಲ್‌ 107.16 ರೂ, ಡೀಸೆಲ್‌ 95.03 ರೂ.

ಬೆಂಗಳೂರು: ತೈಲ ಕಂಪನಿಗಳು ಇಂದು ಮತ್ತೊಮ್ಮೆ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಏರಿಸಿದ ಪರಿಣಾಮವಾಗಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ 94 ಪೈಸೆ ಏರಿಕೆಯಾಗಿದೆ. ಇದರಿಂದ 4 ದಿನಗಳ ಹಿಂದೆ 106.17 ರೂ.ಇದ್ದ ರೂಪೆಟ್ರೋಲ್ ಬೆಲೆ 107.16 ರೂ. ಹಾಗೂ 94.10 ರೂ. ಇದ್ದ ಡೀಸೆಲ್ 95.03 ರೂ. ಗೆ ತಲುಪಿದೆ. ಪದೇ ಪದೆ ಆಗುತ್ತಿರುವ ಈ ದರ ಏರಿಕೆಯಿಂದ ತೀವ್ರ ಕಂಗಾಲಾಗಿರುವ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಜಾಗತಿಕ ಪರಿಸ್ಥಿತಿ ಅರ್ಥವಾದರೂ, ಸರ್ಕಾರ ಸಾಮಾನ್ಯ ಜನರ ಹಿತದೃಷ್ಟಿಯಿಂದ ಇಂಧನ ದರ ನಿಯಂತ್ರಣಕ್ಕೆ ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 97.77 ರೂ.ನಿಂದ 98.64 ರೂ.ಗೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ದರ 90.67ರೂ.ನಿಂದ 91.58 ರೂ.ಗೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 91 ಪೈಸೆ ಹೆಚ್ಚಳವಾಗುವುದರೊಂದಿಗೆ 107.59ರೂ.ಗೆ ತಲುಪಿದ್ದರೆ, ಡೀಸೆಲ್ ದರ 94 ಪೈಸೆ ಏರಿಕೆಯಾಗಿ 94.08 ರೂ. ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರದಲ್ಲಿ ಗರಿಷ್ಠ 96 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಬೆಲೆ 109.70 ರೂ. ಮುಟ್ಟಿದೆ. ಡೀಸೆಲ್ ದರ 94 ಪೈಸೆ ಹೆಚ್ಚಳದೊಂದಿಗೆ 96.07 ರೂ.ಗೆ ಜಿಗಿದಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 82 ಪೈಸೆ ಹೆಚ್ಚಳವಾಗಿ 104.49 ರೂ. ಹಾಗೂ ಡೀಸೆಲ್ ಬೆಲೆ 86 ಪೈಸೆ ಏರಿಕೆಯಾಗಿ 96.11 ರೂ.ಗೆ ತಲುಪಿದೆ.





















































 
 

ಕೇವಲ ಐದು ದಿನಗಳ ಅಂತರದಲ್ಲಿ ಎರಡು ಬಾರಿ ಇಂಧನ ದರ ಹೆಚ್ಚಳವಾಗಿರುವುದು ಸಾರ್ವಜನಿಕರ ಜೇಬಿಗೆ ಭಾರಿ ಕತ್ತರಿ ಹಾಕಿದೆ. ಸತತ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುವ ಆತಂಕ ಎದುರಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯು ದೈನಂದಿನ ಬಳಕೆಯ ಎಲ್ಲ ಅಗತ್ಯ ವಸ್ತುಗಳ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಸಣ್ಣ ವ್ಯಾಪಾರಿಗಳು, ಸಾರಿಗೆ ಉದ್ಯಮದಲ್ಲಿ ತೊಡಗಿರುವವರು, ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವವರು ಮತ್ತು ಪ್ರತಿದಿನ ಸ್ವಂತ ವಾಹನಗಳನ್ನು ಬಳಸುವ ಜನಸಾಮಾನ್ಯರು ಈ ಬೆಲೆ ಏರಿಕೆಯ ನೇರ ಹೊಡೆತವನ್ನು ಅನುಭವಿಸಬೇಕಾಗುತ್ತದೆ.

ಇಂಧನವು ಹೆಚ್ಚು ದುಬಾರಿಯಾಗುತ್ತಿದ್ದಂತೆ ಬಸ್‌ಗಳು, ಟ್ಯಾಕ್ಸಿಗಳು ಮತ್ತು ಸರಕು ಸಾಗಣೆ ವೆಚ್ಚಗಳು ಹೆಚ್ಚಾಗುತ್ತವೆ. ಇದು ಸಹಜವಾಗಿಯೇ ಇತರ ಅಗತ್ಯ ವಸ್ತುಗಳ ಬೆಲೆಗಳೂ ಸಹ ಗಗನಕ್ಕೇರಲು ಕಾರಣವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೀಗೆಯೇ ನಿರಂತರವಾಗಿ ಏರುತ್ತಿದ್ದರೆ, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮತ್ತಷ್ಟು ದುಬಾರಿಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ದೇಶದಲ್ಲಿ ಹಣದುಬ್ಬರ (ಬೆಲೆ ಏರಿಕೆ) ಮತ್ತಷ್ಟು ಹೆಚ್ಚಾಗುವ ಆತಂಕವನ್ನು ಮೂಡಿಸಿದೆ.

error: Content is protected !!
Scroll to Top