ಮಳೆ ಪರಿಣಾಮ ಲ್ಯಾಂಡ್ ಆಗಲು ಸಾಧ್ಯವಾಗದೆ ಆಕಾಶದಲ್ಲೇ ಗಿರಕಿ ಹೊಡೆದ ವಿಮಾನಗಳು
ವಿಟ್ಲ: ವಿಟ್ಲ ಪರಿಸರದಲ್ಲಿ ನಿನ್ನೆ ಎರಡು ವಿಮಾನಗಳು ಬಹಳ ತಗ್ಗಿನಲ್ಲಿ ಹಾರಾಟ ನಡೆಸಿ ಸ್ಥಳೀಯರಲ್ಲಿ ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಕೆಲ ಸಮಯದ ಹಿಂದೆಯಷ್ಟೇ ಈ ಪರಿಸರದಲ್ಲಿ ಖನಿಜ ಶೋಧಕ್ಕಾಗಿ ಕಿರು ವಿಮಾನ ತಗ್ಗಿನಲ್ಲಿ ಹಾರಾಟ ನಡೆಸಿತ್ತು. ಆರಂಭದಲ್ಲಿ ಜನರು ಇದೇ ಮಾದರಿಯ ಹಾರಾಟ ಇದಾಗಿರಬಹುದು ಎಂದು ಭಾವಿಸಿದ್ದರು. ಆದರೆ ಇದು ದೊಡ್ಡ ವಿಮಾನವಾಗಿರುವುದರಿಂದ ಜನ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರಬಹುದು ಎಂದು ಭಾವಿಸಿದರು.
ಮಂಗಳೂರಿನಲ್ಲಿ ಗುರುವಾರ ಸಂಜೆ ವೇಳೆಗೆ ಭಾರಿ ಗಾಳಿ ಮಳೆ ಇದ್ದ ಕಾರಣ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಎರಡು ವಿಮಾನಗಳು ಹವಾಮಾನ ವೈಪರಿತ್ಯದಿಂದಾಗಿ ಲ್ಯಾಂಡ್ ಆಗಲು ಸಾಧ್ಯವಾಗದೆ ಅರ್ಧಗಂಟೆ ಕಾಲ ಆಕಾಶದಲ್ಲೇ ಸುತ್ತಾಡಿ, ತಡವಾಗಿ ಲ್ಯಾಂಡ್ ಆಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು,ಏರ್‌ಪೋರ್ಟ್ ಬಳಿಯೂ ಮಳೆಯಾಗಿದೆ. ಹೀಗಾಗಿ ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಾಗದೆ ಆಕಾಶದಲ್ಲೇ ಸುತ್ತಾಡಿವೆ. ವಿಟ್ಲದ ಬಳಿ ಭಾರಿ ಕೆಲ ಭಾಗದಲ್ಲೇ ವಿಮಾನಗಳು ಸುತ್ತಾಡಿವೆ. ಅರ್ಧಗಂಟೆ ಬಳಿಕ ಎರಡೂ ವಿಮಾನಗಳು ಲ್ಯಾಂಡ್ ಆಗಿವೆ.
ಮೂಡಬಿದಿರೆ, ಬೆಳ್ತಂಗಡಿ, ಬಂಟ್ವಾಳ ಮತ್ತು ವಿಟ್ಲ ಭಾಗಗಳಲ್ಲಿ ಕಡಿಮೆ ಎತ್ತರದಲ್ಲಿ ವಿಮಾನ ಸುತ್ತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆತಂಕಗೊಂಡರು. ಒಂದೇ ಪ್ರದೇಶದಲ್ಲಿ ವಿಮಾನ ಮತ್ತೆ ಮತ್ತೆ ಸುತ್ತುತ್ತಿರುವುದನ್ನು ಕಂಡು ಕೆಲವರು ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿರಬಹುದೆಂದು ಶಂಕಿಸಿದರು.
ವಿಟ್ಲ ಸಮೀಪ ವಿಮಾನವು ಆಗಸದಲ್ಲಿ ಸುತ್ತಾಡುತ್ತಿರುವ ದೃಶ್ಯ ‘ಫ್ಲೈಟ್ ರಾಡಾರ್’ ಆ್ಯಪ್‌ನಲ್ಲೂ ದಾಖಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಇದರ ವಿಡಿಯೋ ಹಾಗೂ ಮಾಹಿತಿ ವ್ಯಾಪಕವಾಗಿ ವೈರಲ್ ಆಯಿತು. ಕೆಲವು ಸಮಯ ‘ಹೋಲ್ಡಿಂಗ್ ಪ್ಯಾಟರ್ನ್’ನಲ್ಲಿ ಸುತ್ತಾಡಿದ ಬಳಿಕ ಹವಾಮಾನದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನ ಸುರಕ್ಷಿತವಾಗಿ ಮಂಗಳೂರು ಲ್ಯಾಂಡ್ ಆಯಿತು. ಮಳೆ ಹಾಗೂ ದಟ್ಟ ಮೋಡದ ಪರಿಣಾಮ ಎರಡು ವಿಮಾನಗಳು ಲ್ಯಾಂಡಿಂಗ್‌ಗೆ ತೊಂದರೆ ಅನುಭವಿಸಿವೆ. ಬಳಿಕ ಎರಡೂ ವಿಮಾನಗಳು ‘ಹೋಲ್ಡಿಂಗ್ ಪ್ಯಾಟರ್ನ್’ ಪೂರ್ಣಗೊಳಿಸಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿವೆ ಎಂದು ಮಂಗಳೂರು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ತೀರ ಕೆಳಭಾಗದಲ್ಲೇ ವಿಮಾನಗಳು ಹಾರಾಟ ನಡೆಸಿದ್ದರಿಂದ ವಿಟ್ಲದ ಜನರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.
























