ಮನೆ ಮನೆಗೆ ಭೇಟಿ ನೀಡಿ ಅರ್ಹ ಮತದಾರರನ್ನು ಗುರುತಿಸುವ ಕಾರ್ಯ
ನವದೆಹಲಿ: ಭಾರತ ಚುನಾವಣಾ ಆಯೋಗ ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲು ಆದೇಶ ಪ್ರಕಟಿಸಿದೆ.
ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೊರತು ಪಡಿಸಿ ಉಳಿದ ರಾಜ್ಯಗಳಲ್ಲಿ ಎಸ್ಐಆರ್ ನಡೆಯಲಿದೆ. ಈ ರಾಜ್ಯಗಳಲ್ಲಿ ಕಷ್ಟಕರವಾದ ಭೂ ಪ್ರದೇಶ, ಹವಾಮಾನ ಅಡಚಣೆಗಳು ಮತ್ತು ಕಾರ್ಯಾಚರಣೆಯ ಸವಾಲುಗಳು, ವಿಶೇಷವಾಗಿ ಹಿಮಪಾತ ಪೀಡಿತ ಮತ್ತು ಎತ್ತರದ ಪ್ರದೇಶಗಳಿರುವುದರಿಂದ ಎಸ್ಐಆರ್ ಪ್ರಕ್ರಿಯೆಯನ್ನು ಮುಂದೂಡಿದೆ. ಜನಗಣತಿಯ ಎರಡನೇ ಹಂತದ ಪ್ರಗತಿ ಮತ್ತು ಸ್ಥಳೀಯ ಲಾಜಿಸ್ಟಿಕ್ ಪರಿಸ್ಥಿತಿಗಳನ್ನು ಪರಿಗಣಿಸಿದ ನಂತರ ಈ ಪ್ರದೇಶಗಳಿಗೆ ಪ್ರತ್ಯೇಕ ವೇಳಾಪಟ್ಟಿಯನ್ನು ಘೋಷಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಹಂತ 3ರ ಪ್ರಾರಂಭದ ಕುರಿತು ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಮತದಾರರು ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಅರ್ಹ ನಾಗರಿಕರು ಮಾತ್ರ ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳುವ ಮೂಲಕ ನಿಖರವಾದ ಮತದಾರರ ಪಟ್ಟಿಯನ್ನು ನಿರ್ವಹಿಸುವುದು ಮತ್ತು ಅನರ್ಹ ಮತದಾರರನ್ನು ತಡೆಯುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಈ ಹಂತದಲ್ಲಿ ಸುಮಾರು 36.73 ಕೋಟಿ ಮತದಾರರನ್ನು ತಲುಪುವ ಗುರಿಯನ್ನು ಹೊಂದಲಾಗಿದೆ. ಮರಣ ಹೊಂದಿದವರು, ಶಾಶ್ವತವಾಗಿ ವಲಸೆ ಹೋದವರು ಮತ್ತು ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿರುವವರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.
ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ದೆಹಲಿ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಅಕ್ಟೋಬರ್ 1 ಅರ್ಹತಾ ದಿನವನ್ನಾಗಿ (Qualifying Date – ಒಬ್ಬ ನಾಗರಿಕನು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ನೋಂದಾಯಿಸಲು ಕನಿಷ್ಠ 18 ವರ್ಷ ತುಂಬಿರಬೇಕಾದ ನಿಗದಿತ ಕಟ್ಆಫ್ ದಿನಾಂಕ) ಪರಿಗಣಿಸಲಾಗಿದೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಒಡಿಶಾ, ಜಾರ್ಖಂಡ್, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಉತ್ತರಾಖಂಡ ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯುನಲ್ಲಿ ನಡೆಯಲಿದೆ.
ಜೂನ್ 20 – ಜೂನ್ 29: ಅಧಿಕಾರಿಗಳಿಗೆ ಅಗತ್ಯ ತರಬೇತಿ ಮತ್ತು ಫಾರ್ಮ್ಗಳ ಮುದ್ರಣ ಕಾರ್ಯ.
ಜೂನ್ 30 – ಜುಲೈ 29: ಬೂತ್ ಮಟ್ಟದ ಅಧಿಕಾರಿಗಳು (BLOs) ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಪ್ರಮುಖ ಅವಧಿ.
ಆಗಸ್ಟ್ 5: ಮತದಾರರ ಕರಡು ಪಟ್ಟಿ ಪ್ರಕಟಣೆ.
ಆಗಸ್ಟ್ 5 – ಸೆಪ್ಟೆಂಬರ್ 4: ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಲು ಮತ್ತು ಹೊಸದಾಗಿ ಹೆಸರು ಸೇರಿಸಲು ಇರುವ ಕಾಲಾವಕಾಶ.
ಅಕ್ಟೋಬರ್ 7 : ಕರ್ನಾಟಕದ ಅಂತಿಮ ಪರಿಷ್ಕೃತ ಮತದಾರರ ಪಟ್ಟಿ ಅಧಿಕೃತವಾಗಿ ಬಿಡುಗಡೆ
ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜನಗಣತಿಯ ಮನೆ ಪಟ್ಟಿ ಮಾಡುವ ಪ್ರಕ್ರಿಯೆಯೊಂದಿಗೆ ಈ ಎಸ್ಐಆರ್ ಹಂತವನ್ನು ಜೋಡಿಸಲಾಗಿದೆ. ಇದರಿಂದ ಆಡಳಿತ ಯಂತ್ರಕ್ಕೆ ನಿಖರ ಮಾಹಿತಿ ಸಿಗಲಿದೆ.
ಈ ಹಂತದಲ್ಲಿ ದೇಶಾದ್ಯಂತ 3.94 ಲಕ್ಷಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಲಿದ್ದಾರೆ. ಅವರಿಗೆ ನೆರವಾಗಲು ವಿವಿಧ ರಾಜಕೀಯ ಪಕ್ಷಗಳಿಂದ 3.42 ಲಕ್ಷ ಬೂತ್ ಮಟ್ಟದ ಏಜೆಂಟರನ್ನು ನೇಮಿಸಲು ಮುಂದಾಗಿದೆ. ಸಾರ್ವಜನಿಕರು ತಮ್ಮ ನಿಖರ ವಿವರಗಳನ್ನು ನಮೂದಿಸಲು ಹೊಸ ನಮೂನೆಗಳನ್ನು ಭರ್ತಿ ಮಾಡಬೇಕಾಗುತ್ತದೆ.
























