ಹಿಜಾಬ್ ನಿಷೇಧಿಸಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶ ಹಿಂಪಡೆದ ಕಾಂಗ್ರೆಸ್ ಸರ್ಕಾರ
ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ರಾಜ್ಯ ಸರ್ಕಾರ ಮತ್ತೆ ಅವಕಾಶ ಕಲ್ಪಿಸಿದೆ. ಎಲ್ಲ ಧರ್ಮಗಳ ಧಾರ್ಮಿಕ, ಸಾಂಪ್ರದಾಯಿಕ ವಸ್ತುಗಳಿಗೆ ಅವಕಾಶ ಕೊಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಶೈಕ್ಷಣಿಕ ವರ್ಷದಿಂದಲೇ ಆದೇಶ ಜಾರಿಗೆ ಬರಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಹಿಜಬ್ ನಿರ್ಬಂಧಿಸಿ 2022ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನ ಹಿಂಪಡೆದ ಸರ್ಕಾರ, ಹಿಜಬ್ ಧರಿಸಲು ಅವಕಾಶ ಕಲ್ಪಿಸಿ ಹೊಸ ಆದೇಶ ಜಾರಿ ಮಾಡಿದೆ. ಇದೇ ವೇಳೆ ಕೇಸರಿ ಶಾಲಿಗೆ ಅವಕಾಶ ಇದೆಯಾ ಎಂಬ ಪ್ರಶ್ನೆಗೆ ಸಚಿವರು ʻಇಲ್ಲʼ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಸರ್ವಶಿಕ್ಷಣ ಕಚೇರಿಯಲ್ಲಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಷದ್ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಆದೇಶ ಜಾರಿಗೊಳಿಸಿರುವುದಾಗಿ ಹೇಳಿದರು. ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಮಾಡಿದ್ದೇವೆ. ಜನಿವಾರ ಘಟನೆ ಇತ್ತೀಚೆಗೆ ಆಗಿತ್ತು. ಇದರಿಂದ ಮಕ್ಕಳಿಗೆ ಸಮಸ್ಯೆ ಆಗುತ್ತಿತ್ತು. ಮಾನಸಿಕ ಹಿಂಸೆ ಆಗುತ್ತಿತ್ತು. ಆದ್ದರಿಂದ ಧಾರ್ಮಿಕ ವಸ್ತ್ರಗಳಿಗೆ ಶಾಲಾ-ಕಾಲೇಜುಗಳಿಗೆ ಅವಕಾಶ ನೀಡಲಾಗಿದೆ. ಜನಿವಾರ, ಶಿವದಾರ ಸೇರಿ ಧಾರ್ಮಿಕ ವಸ್ತುಗಳಿಗೆ ಅವಕಾಶ ನೀಡಲಾಗಿದೆ. 1-12ನೇ ತರಗತಿವರೆಗೂ ಇದು ಅನ್ವಯವಾಗಲಿದೆ. ಎಲ್ಲ ಧರ್ಮದ ಧಾರ್ಮಿಕ, ಸಂಪ್ರದಾಯದ ವಸ್ತುಗಳಿಗೂ ಅವಕಾಶ ಕೊಡಲಾಗಿದೆ ಎಂದು ತಿಳಿಸಿದರು.
ಹಿಜಬ್‌ಗೆ ಶಾಲಾ – ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಪೇಟ/ಟರ್ಬನ್, ಜನಿವಾರ/ಪವಿತ್ರ ದಾರ, ಶಿವದಾರ, ರುದ್ರಾಕ್ಷಿ ತಲೆವಸ್ತ್ರ/ಹಿಜಬ್‌ಗೆ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಪರವಾಗಿ ಈ ನಿರ್ಧಾರ ಮಾಡಲಾಗಿದೆ ಎಂದು ವಿವರಿಸಿದರು.
ಕೇಸರಿ ಶಾಲು ಧಾರ್ಮಿಕ ಅಂತ ಬರೋದಿಲ್ಲ, ಆದ್ದರಿಂದ ಕೇಸರಿ ಶಾಲಿಗೆ ಶಾಲಾ – ಕಾಲೇಜುಗಳಲ್ಲಿ ಅವಕಾಶ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದರು.
2022ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಶಾಲಾ – ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ನಾವು 2022ರ ಸರ್ಕಾರದ ಆದೇಶ ಹಿಂಪಡೆದು ಹೊಸ ಆದೇಶ ಮಾಡಿದ್ದೇವೆ ಎಂದು ತಿಳಿಸಿದರು. ಬಿಜೆಪಿ ಸರ್ಕಾರದ ಆದೇಶ ಎತ್ತಿಹಿಡಿದಿದ್ದ ಹೈಕೋರ್ಟ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, ಹೈಕೋರ್ಟ್ ಆದೇಶದ ಬಗ್ಗೆ ಮಾತಾಡಲ್ಲ, ಅದನ್ನು ಲೀಗಲ್ ಟೀಂ ಅವರು ನೋಡಿಕೊಳ್ತಾರೆ ಎಂದು ಉತ್ತರಿಸಿದರು.
ಹೊಸ ಆದೇಶದ ಮುಖ್ಯಾಂಶ
- ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಪದವಿಪೂರ್ವ ಕಾಲೇಜುಗಳು, ಸಂಸ್ಥೆಯ ಅಗತ್ಯಗಳು ಮತ್ತು ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ನಿಯಮಾನುಸಾರ ಸಮವಸ್ತ್ರವನ್ನು ನಿಗದಿಪಡಿಸಿ ಕಡ್ಡಾಯಗೊಳಿಸುವುದನ್ನು ಮುಂದುವರಿಸತಕ್ಕದ್ದು.
- ವಿದ್ಯಾರ್ಥಿಗಳು ನಿಗದಿಪಡಿಸಲಾದ ಸಮವಸ್ತ್ರದೊಂದಿಗೆ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನ ಧರಿಸಲು ಅನುಮತಿಸಲಾಗಿದೆ. ಆದರೆ, ಇಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಸಮವಸ್ತ್ರಕ್ಕೆ ಪೂರಕವಾಗಿರಬೇಕು ಮತ್ತು ನಿಗದಿತ ಸಮವಸ್ತ್ರವನ್ನು ಬದಲಿಸುವ, ಮೂಲ ಉದ್ದೇಶವನ್ನ ಮಾರ್ಪಡಿಸುವ ಅಥವಾ ವಿಫಲಗೊಳಿಸುವಂತಿರಬಾರದು.
- ಇಂತಹ ಅನುಮತಿಸಬಹುದಾದ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಪೇಟ/ಟರ್ಬನ್, ಜನಿವಾರ/ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ತಲೆವಸ್ತ್ರ/ಹಿಜಾಬ್ ಅಥವಾ ಇತರ ಯಾವುದೇ ಸಮಾನ ಸ್ವರೂಪದ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಸೇರಿರಬಹುದು. ಆದರೆ, ಇವು ಶಿಸ್ತು, ಸುರಕ್ಷತೆ ಮತ್ತು ವಿದ್ಯಾರ್ಥಿಯ ಗುರುತಿಸುವಿಕೆಗೆ ಅಡ್ಡಿಯಾಗಬಾರದು.
- ನಿಗದಿತ ಸಮವಸ್ತ್ರದೊಂದಿಗೆ ಇಂತಹ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಧರಿಸಿರುವ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ ತರಗತಿ ಪರೀಕ್ಷಾ ಕೊಠಡಿ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ.
- ಇಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸುವಂತೆ ಯಾವುದೇ ವಿದ್ಯಾರ್ಥಿಯನ್ನು ಒತ್ತಾಯಿಸುವಂತಿಲ್ಲ. ಅದೇ ರೀತಿ ಸರ್ಕಾರವು ಅನುಮತಿಸಿರುವ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಬಲವಂತವಾಗಿ ತೆಗೆಯುವಂತೆಯೂ ಒತ್ತಾಯಿಸುವಂತಿಲ್ಲ. ಆದರೆ, ಪರೀಕ್ಷಾ ಸಂದರ್ಭಗಳಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದ ವಸ್ತ್ರ, ಸಂಹಿತೆಯ ನಿಯಮಗಳನ್ನು ಸಂದರ್ಭೋಚಿತವಾಗಿ ಸಂಬಂಧಿಸಿದ ಪ್ರಾಧಿಕಾರಗಳು ಅಳವಡಿಸಿಕೊಳ್ಳತಕ್ಕದ್ದು.
- ಈ ಆದೇಶದ ಅನುಷ್ಠಾನವು ಏಕರೂಪವಾಗಿರಬೇಕು. ಧಾರ್ಮಿಕ, ಸಾಂಪ್ರದಾಯಿಕ ನಿಷ್ಪಕ್ಷಪಾತದಿಂದ ಕೂಡಿರಬೇಕು ಮತ್ತು ತಾರತಮ್ಯ ರಹಿತವಾಗಿರಬೇಕು.
- ಸಮಾನತೆ, ಘನತೆ, ಭ್ರಾತೃತ್ವ, ಜಾತ್ಯತೀತತೆ, ವೈಜ್ಞಾನಿಕತೆ, ವೈಚಾರಿಕತೆ ಮತ್ತು ಶಿಕ್ಷಣದ ಹಕ್ಕು ಎಂಬ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿರತಕ್ಕದ್ದು.
























