ಮಂಗಳೂರು: ಸುರತ್ಕಲ್ ಸಮೀಪ ಕುಳಾಯಿ ಹೊಸಬೆಟ್ಟುವಿನಲ್ಲಿ 2014ರಲ್ಲಿ ನಡೆದ ಕೊಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
2014ರ ಫೆಬ್ರವರಿ 8ರಂದು ಸಂಜೆ 4ರಿಂದ ರಾತ್ರಿ 8ರ ನಡುವೆ ಕುಳಾಯಿ ಹೊಸಬೆಟ್ಟು ಕೋರ್ದಬ್ಬು ಕಲದ ಬಳಿ ವಾಸವಾಗಿದ್ದ ಸುಮತಿ ಪ್ರಭು ಅವರನ್ನು ಕುತ್ತಿಗೆಗೆ ಚೂರಿಯಿಂದ ಇರಿದು ಕೊಲೆ ಮಾಡಿ, ಅವರ ಮೈಮೇಲಿದ್ದ ಸುಮಾರು 3.80 ಲಕ್ಷ ಮೌಲ್ಯದ 192 ಗ್ರಾಂ (24 ಪವನ್) ಬಂಗಾರದ ಆಭರಣಗಳನ್ನು ದರೋಡೆ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಿವರಾಮ್, ಬಹದ್ದೂರ್ ಸಿಂಗ್ ಅಲಿಯಾಸ್ ಬಹದ್ದೂರ್ ಅಲಿಯಾಸ್ ಬುಯ್ಯ ಹಾಗೂ ಶಹನ್ವಾಜ್ ಅಲಿಯಾಸ್ ಶಾನು ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಲಾಗಿದ್ದು, ಪ್ರಕರಣ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು.
ಈ ನಡುವೆ ಆರೋಪಿಗಳಲ್ಲೊಬ್ಬನಾದ ಬಹದ್ದೂರ್ ಸಿಂಗ್ ಕಳೆದ 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ನ್ಯಾಯಾಲಯವು ಆತನ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಮಾಹಿತಿ ಆಧಾರದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿ ಗ್ರಾಮದಲ್ಲಿ ಅಡಗಿದ್ದ ಬಹದ್ದೂರ್ ಸಿಂಗ್‌ನನ್ನು ಮೇ 3ರಂದು ಬಂಧಿಸಲಾಗಿದೆ.
























