ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಹೀನಾಯ ಸೋಲು
ನವದೆಹಲಿ: ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಿಗೆ ಎದುರಾಗುವ ದೊಡ್ಡ ಪ್ರಶ್ನೆ ಯಾರಾಗಲಿದ್ದಾರೆ ಮುಖ್ಯಮಂತ್ರಿ ಎನ್ನುವುದು. ಈ ಸಲ ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಗೆಎಲುವು ಕಂಡಿರುವ ಬಿಜೆಪಿಯ ಎದುರು ಕೂಡ ಈ ಪ್ರಶ್ನೆ ಇದೆ. ಅಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ಯೋಗ್ಯರಾದ ಹಲವು ನಾಯಕರು ಇರುವುದರಿಂದ ಮುಖ್ಯಮಂತ್ರಿಯ ಆಯ್ಕೆ ಬಿಜೆಪಿ ಪಾಲಿಗೆ ಕಠಿಣವಾಗಲಿದೆ ಎನ್ನಲಾಗುತ್ತಿದೆ.
ಬಿಜೆಪಿ ತನ್ನ ಪ್ರಚಾರದಲ್ಲಿ ಮಹಿಳಾ ಭದ್ರತೆಯನ್ನು ಮುಂಚೂಣಿಯಲ್ಲಿಟ್ಟುಕೊಂಡಿರುವುದರಿಂದ ಕೇಸರಿ ಪಕ್ಷವು ಮಹಿಳಾ ಮುಖ್ಯಮಂತ್ರಿಯನ್ನು ನೇಮಿಸಬಹುದು ಎಂಬ ವದಂತಿ ಹರಡಿದೆ. ದೆಹಲಿಯಲ್ಲಿ ಮಾತ್ರ ಬಿಜೆಪಿಯ ಮಹಿಳಾ ಮುಖ್ಯಮಂತ್ರಿ ಇರುವುದರಿಂದ ಮಹಿಳಾ ಮೀಸಲಾತಿ ಕಾಯ್ದೆಯ ಗೊಂದಲದ ನಂತರ ಬಿಜೆಪಿ ತನ್ನ ಮಹಿಳಾ ಪರ ಇಮೇಜ್ ಉಳಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಬಂಗಾಳದ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ರಾಜ್ಯಾಧ್ಯಕ್ಷರ ಹೆಸರುಗಳು ಕೂಡ ಸಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿವೆ.
ಸುವೇಂದು ಅಧಿಕಾರಿ
ಟಿಎಂಸಿಯ ಮಾಜಿ ನಾಯಕ ಮತ್ತು ಮಮತಾ ಬ್ಯಾನರ್ಜಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ ಬಳಿಕ ಬಿಜೆಪಿ ಸೇರಿ ರಾಜ್ಯಾಧ್ಯಕ್ಷರಾಗಿದ್ದರು. 2021ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರು ಟಿಎಂಸಿಯಿಂದ ಹೊರಬಂದು ಬಿಜೆಪಿ ಸೇರಿದರು. ಅವರನ್ನು ಸಿಎಂ ಸ್ಥಾನದ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಬಂಗಾಳದಲ್ಲಿ ಬಿಜೆಪಿಯ ಪ್ರಮುಖ ನಾಯಕನಾಗಿರುವ ಸುವೇಂದು ಅಧಿಕಾರಿ 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸುವ ಮೂಲಕ ಗಮನ ಸೆಳೆದಿದ್ದರು.
ಸಮಿಕ್ ಭಟ್ಟಾಚಾರ್ಯ
ಹೊಸದಾಗಿ ನೇಮಕಗೊಂಡ ಬಂಗಾಳದ ಬಿಜೆಪಿ ಮುಖ್ಯಸ್ಥರಾದ ಸಮಿಕ್ ಭಟ್ಟಾಚಾರ್ಯ ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು. ತೆರೆಮರೆಯಲ್ಲಿ ಕೆಲಸ ಮಾಡಲು ಹೆಸರುವಾಸಿಯಾದ ಭಟ್ಟಾಚಾರ್ಯ ಅವರು ಬಿಜೆಪಿಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಗ್ನಿಮಿತ್ರ ಪಾಲ್
ಫ್ಯಾಷನ್ ಡಿಸೈನರ್ ಆಗಿರುವ ಅಗ್ನಿಮಿತ್ರ ಪಾಲ್ ಬಂಗಾಳದಲ್ಲಿ ಬಿಜೆಪಿಯ ಪ್ರಮುಖ ನಾಯಕಿಯರಲ್ಲಿ ಒಬ್ಬರು. ಬಿಜೆಪಿ ಮಹಿಳಾ ಮೋರ್ಚಾದ ಬಂಗಾಳ ಘಟಕದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ್ದ ಇವರು ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗುವ ಮೂಲಕ ಪ್ರಮುಖ ಹುದ್ದೆಯನ್ನು ಏರಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಿಂದ ಪದವೀಧರೆಯಾಗಿರುವ ಪಾಲ್ ಹೆಸರು ಸಿಎಂ ಸಂಭಾವ್ಯ ಪಟ್ಟಿಯಲ್ಲಿ ಕೇಳಿಬರುತ್ತಿದೆ.
ರೂಪಾ ಗಂಗೂಲಿ
ಬಿಆರ್ ಚೋಪ್ರಾ ಅವರ ಮಹಾಭಾರತದಲ್ಲಿ ದ್ರೌಪದಿ ಪಾತ್ರದ ಮೂಲಕ ಪ್ರಸಿದ್ಧಿ ಪಡೆದಿದ್ದ ರೂಪಾ ಗಂಗೂಲಿ ಬಿಜೆಪಿಯ ಮತ್ತೊಬ್ಬ ಜನಪ್ರಿಯ ನಾಯಕಿ. ಅವರು ರಾಜ್ಯಸಭಾ ಸಂಸದೆಯೂ ಆಗಿದ್ದಾರೆ. ಬಂಗಾಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಎರಡು ವರ್ಷಗಳ ಅವಧಿಯಿಂದಾಗಿ ಜನಸಾಮಾನ್ಯರ ಸಂಪರ್ಕವನ್ನು ಹೊಂದಿದ್ದಾರೆ.
ದಿಲೀಪ್ ಘೋಷ್
ಆಕ್ರಮಣಕಾರಿ ರಾಜಕೀಯ ಶೈಲಿ ಮತ್ತು ಜನಸಾಮಾನ್ಯರ ಸಂಪರ್ಕಕ್ಕೆ ಹೆಸರುವಾಸಿಯಾದ ಮಾಜಿ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಅಸ್ತಿತ್ವವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯ ಬಿಜೆಪಿ ಮುಖ್ಯಸ್ಥರಾಗಿಲ್ಲದಿದ್ದರೂ ಇವರು ಬಂಗಾಳದ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಉಳಿದಿದ್ದಾರೆ. ಆರ್‌ಎಸ್‌ಎಸ್ ಹಿನ್ನೆಲೆಯ ದಿಲೀಪ್ ಘೋಷ್ 2014ರಲ್ಲಿ ಬಂಗಾಳ ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿ ಸೇರಿದರು.
ಶಂಕರ್ ಘೋಷ್
ಸಿಲಿಗುರಿಯ ಬಿಜೆಪಿ ಶಾಸಕ ಶಂಕರ್ ಘೋಷ್ ಉತ್ತರ ಬಂಗಾಳದ ಪ್ರಮುಖ ಪ್ರಾದೇಶಿಕ ನಾಯಕ. ಅವರ ಪ್ರಭಾವ ರಾಜ್ಯವ್ಯಾಪ್ತಿಗಿಂತ ಹೆಚ್ಚು ಪ್ರಾದೇಶಿಕವಾಗಿದೆ. ಅವರ ಹೆಸರು ಕೂಡ ಸಿಎಂ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಉತ್ತರ ಬಂಗಾಳದ ನಾಯಕರಾದ ಇವರು ಸ್ಥಳೀಯ ಮಟ್ಟದಲ್ಲಿ ಸಂಘಟನಾ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮಮತಾ ಬ್ಯಾನರ್ಜಿ ಹೀನಾಯ ಸೋಲು
4ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಉತ್ಸಾಹ ಮತ್ತು ವಿಶ್ವಾಸದಲ್ಲಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಭಾರಿ ಮುಖಭಂಗವಾಗಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಬಿಜೆಪಿ ಬಹುಮತದ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಆದರೂ ಧೃತಿಗೆಡದ ಮಮತಾ ಬ್ಯಾನರ್ಜಿ ಸೂರ್ಯಾಸ್ತವಾಗುವಷ್ಟರಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಡಿಯೋ ಮೂಲಕ ತಮ್ಮ ಬೆಂಬಲಿಗರಿಗೆ ಧೈರ್ಯ ತುಂಬಿದ್ದರು. ಸಂಜೆ ಟಿಎಂಸಿ ಭಾರಿ ಸೋಲನ್ನು ಅನುಭವಿಸುತ್ತಿದ್ದಂತೆ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ ಎಂದು ಆರೋಪ ಮಾಡಿದ್ದರು. ಇದೀಗ ತಮ್ಮ ತವರು ಕ್ಷೇತ್ರವಾದ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಎದುರು ಹೀನಾಯವಾಗಿ ಸೋತಿದ್ದಾರೆ.
ಸುವೇಂದು ಅಧಿಕಾರಿ 20ನೇ ಸುತ್ತಿನ ಎಣಿಕೆಯ ನಂತರ 73,463 ಮತಗಳನ್ನು ಪಡೆದರೆ, ಮಮತಾ ಬ್ಯಾನರ್ಜಿ 58,349 ಮತಗಳನ್ನು ಪಡೆದರು. ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ಅವರನ್ನು 15,114 ಮತಗಳಿಂದ ಸೋಲಿಸಿದರು. ಮಮತಾ ಬ್ಯಾನರ್ಜಿಯವರ ರಾಜಕೀಯ ಭದ್ರಕೋಟೆ ಎಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟ ಈ ಕ್ಷೇತ್ರದಲ್ಲಿ ಈ ಬಾರಿ ಮತದಾರರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಇದು ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ.
ಕಳೆದ ಚುನಾವಣೆಯಲ್ಲೂ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋತಿದ್ದರು ಎಂಬುದು ಗಮನಾರ್ಹ. ಆದರೆ, ಆ ಚುನಾವಣೆಯಲ್ಲಿ ಅವರು ನಂದಿಗ್ರಾಮ ಕ್ಷೇತ್ರದಲ್ಲಿ ಸೋತಿದ್ದರು. ಈ ಬಾರಿ ಭವಾನಿಪುರ ಕ್ಷೇತ್ರದಿಂದ ಸೋತಿದ್ದಾರೆ.
ಏಳನೇ ಸುತ್ತಿನ ಅಂತ್ಯದ ವೇಳೆಗೆ ಮಮತಾ ಬ್ಯಾನರ್ಜಿ 17,000ಕ್ಕೂ ಹೆಚ್ಚು ಮತಗಳ ಮುನ್ನಡೆಯನ್ನು ಹೊಂದಿದ್ದರು. ಆದರೆ ನಂತರದ ಸುತ್ತುಗಳಲ್ಲಿ ಅಂತರ ಕಡಿಮೆಯಾಯಿತು. 14ನೇ ಸುತ್ತಿನ ವೇಳೆಗೆ 4,000ಕ್ಕಿಂತ ಕಡಿಮೆಯಾಯಿತು. ದಕ್ಷಿಣ ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆ ಎಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟ ಈ ಸ್ಥಾನವು ಇಬ್ಬರು ನಾಯಕರ ನಡುವಿನ ಪ್ರತಿಷ್ಠೆಯ ಸ್ಪರ್ಧೆಯಾಗಿತ್ತು.
























