ಉಡುಪಿ: ಕಳೆದ ಎರಡು ನಾಲ್ಕು ವರ್ಷದ ಹಿಂದೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಹಿಂಸಾತ್ಮಕ ಘಟನೆಯೊಂದಕ್ಕೆ ಸಂಬಂಧಿಸಿದ ಹಾಗೆ ಪ್ರಕರಣದ ಆರೋಪಿಗೆ ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆಯ ಜೊತೆಗೆ ಮೂವತ್ತು ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಕೇರಳದ ರತೀಶ್ ಕೆ.ಟಿ. (42) ಎಂಬಾತನೇ ಶಿಕ್ಷೆಗೆ ಗುರಿಯಾದ ಆರೋಪಿ.
ರತೀಶ್ ಮತ್ತು ಸುಧೀರ್ ಎಂಬವರು 2022 ರಲ್ಲಿ ತಾರ ಗ್ರಾಮದ ಮಂಡಾಡಿಜಡ್ಡು ಎಂಬಲ್ಲಿ ಇರುವ ರಬ್ಬರ್ ತೋಟವೊಂದರಲ್ಲಿ ಕೆಲಸ ಮಾಡುವ ಸಂಜೀವ ಕುಮಾರ್ ಎಂಬಾತನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಕಷ್ಟು ಮದ್ಯಪಾನ ಮಾಡಿದ ಸುಧೀರ್ ಮತ್ತು ರತೀಶ್ ನಡುವೆ ಕೆಲಸದ ವಿಷಯಕ್ಕೆ ಸಂಬಂಧಿಸಿದ ಹಾಗೆ ಮಾತಿಗೆ ಮಾತು ಬೆಳೆದು ಜಗಳ ನಡೆದಿತ್ತು.
ಇದಾದ ಎರಡು ದಿನಗಳ ಬಳಿಕ ರತೀಶ್ ರಾತ್ರಿ ವೇಳೆಯಲ್ಲಿ ಸುಧೀರ್‌ನ ಮುಖಕ್ಕೆ ಆ್ಯಸಿಡ್ ಎರಚಿ ನಾಪತ್ತೆಯಾಗಿದ್ದ. ಇದರಿಂದ ಸುಧೀರ್ ತೀವ್ರವಾಗಿ ಗಾಯಗೊಂಡಿದ್ದ. ಹೆಬ್ರಿ ಪೊಲೀಸರು ಈ ಪ್ರಕರಣವನ್ನು ಕೊಲೆ ಪ್ರಯತ್ನ ಎಂಬುದಾಗಿ ದಾಖಲಿಸಿ, ಆರೋಪ ಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸಿದ್ದರು.
ಈಗ ಕೋರ್ಟ್ ಆರೋಪಿಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿರುವುದಾಗಿದೆ.
























