ತೊದಲುತ್ತಾ ಮಾತನಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪಾನಮತ್ತರಾಗಿ ವಿಧಾನಸಭೆಗೆ ಬಂದು ಕಲಾಪದಲ್ಲಿ ಭಾಗವಹಿಸಿದ ವಿಡಿಯೋ ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಭಗವಂತ್ ಮಾನ್ ತೊದಲುತ್ತಾ ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ಈಗ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಭಗವಂತ್ ಮಾನ್ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆಮ್ ಆದ್ಮಿ ಪಾರ್ಟಿಗೆ ಈ ಪ್ರಕರಣ ಬಹಳ ಮುಜುಗರವುಂಟು ಮಾಡಿದೆ.
ಭಗವಂತ್ ಮಾನ್ ಅವರ ಕುಡಿತದ ಚಟ ಹಲವು ಬಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಮದ್ಯಪಾನ ಮಾಡುವುದಿಲ್ಲ ಎಂದು ಸಾರ್ವಜನಿಕವಾಗಿ ತಮ್ಮ ತಾಯಿಯ ಮೇಲೆ ಪ್ರಮಾಣ ಮಾಡಿದ್ದ ಅವರು, ತಮ್ಮ ವಾಗ್ದಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಇತ್ತೀಚಿಗಷ್ಟೇ ಆಪ್ ತೊರೆದು ಬಿಜೆಪಿ ಸೇರಿರುವ ಸ್ವಾತಿ ಮಲಿವಾಲ್, ಭಗವಂತ್ ಮಾನ್ ಅವರು ತೊದಲುತ್ತಾ ಮಾತನಾಡುತ್ತಿರುವ ವಿಡಿಯೋವನ್ನು ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ. ಆಪ್ ಮುಖ್ಯಮಂತ್ರಿ ಪಂಜಾಬ್ ವಿಧಾನಸಭೆಯ ಪಾವಿತ್ರ್ಯವನ್ನು ಹಾಳು ಮಾಡಿದ್ದಾರೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.
“ಇಂದು ಮತ್ತೊಮ್ಮೆ, ಪಂಜಾಬ್ ಸಿಎಂ ಭಗವಂತ್ ಮಾನ್ ಪ್ರಜಾಪ್ರಭುತ್ವದ ದೇವಾಲಯವಾದ ಪಂಜಾಬ್ ಶಾಸಕಾಂಗ ಸಭೆಗೆ ಸಂಪೂರ್ಣವಾಗಿ ಮದ್ಯದ ಅಮಲಿನಲ್ಲಿ ಆಗಮಿಸಿದ್ದಾರೆ. ಈ ವ್ಯಕ್ತಿ ಕುಡಿದು ಗುರುದ್ವಾರ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಲೋಕಸಭೆಗೂ ಈತ ಕುಡಿದು ಬಂದ ಉದಾಹರಣೆಗಳಿವೆ. ಸರ್ಕಾರಿ ಸಭೆಗಳಲ್ಲೂ ಪಾನಮತ್ತರಾದ ಆರೋಪಗಳು ಇವರ ಮೇಲಿದೆ. ತಮ್ಮ ತಾಯಿ ಮೇಲೆ ಮಾಡಿದ ಪ್ರಮಾಣವನ್ನೂ ಭಗವಂತ್ ಮಾನ್ ಮರೆತಿದ್ದಾರೆ” ಎಂದು ಸ್ವಾತಿ ಮಲಿವಾಲ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
“ಪಂಜಾಬ್ನಂತಹ ಸೂಕ್ಷ್ಮ ಗಡಿ ರಾಜ್ಯದ ಮುಖ್ಯಮಂತ್ರಿ ಯಾವಾಗಲೂ ಮದ್ಯದ ಅಮಲಿನಲ್ಲಿ ಇರುತ್ತಾರೆ ಎಂದರೆ ಖಂಡಿತವಾಗಿಯೂ ಅದು ರಾಷ್ಟ್ರದ ಭದ್ರತೆಗೆ ಅಪಾಯಕಾರಿ. ಭಗವಂತ್ ಮಾನ್ ಕುಡಿದ ಅಮಿಲಿನಲ್ಲೇ ಸರ್ಕಾರಿ ಕಡತಗಳಿಗೆ ಸಹಿ ಹಾಕುವುದು ನಾಚಿಕೆಗೇಡಿನ ಸಂಗತಿ” ಎಂದು ಸ್ವಾತಿ ಮಲಿವಾಲ್ ಹರಿಹಾಯ್ದಿದ್ದಾರೆ.
ನಿದ್ದೆ ಮಾಡುತ್ತಿರುವ ಸಮಯದಲ್ಲಿ ಮಾತ್ರ ಮದ್ಯಪಾನದಿಂದ ದೂರವಿರುವ ವ್ಯಕ್ತಿ ಪಂಜಾಬ್ ಅನ್ನು ಹೇಗೆ ಮುನ್ನಡೆಸಬಹುದು? ಭಗವಂತ್ ಮಾನ್ ಈ ಕೂಡಲೇ ಮದ್ಯ ಪರೀಕ್ಷೆಗೆ ಒಳಗಾಗಬೇಕು ಮತ್ತು ತಪ್ಪಿತಸ್ಥರೆಂದು ಕಂಡುಬಂದರೆ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕು” ಎಂದು ಸ್ವಾತಿ ಮಲಿವಾಲ್ ಆಗ್ರಹಿಸಿದ್ದಾರೆ.
ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೂಡ ಭಗವಂತ್ ಮಾನ್ ವಿರುದ್ಧ ವಿಧಾನಸಭೆಗೆ ಕುಡಿದು ಬಂದ ಆರೋಪ ಹೊರಿಸಿದ್ದು, ಮುಖ್ಯಮಂತ್ರಿಯೂ ಸೇರಿದಂತೆ ಎಲ್ಲ ಆಪ್ ಶಾಸಕರ ಡೋಪ್ ಟೆಸ್ಟ್ಗೆ ಒತ್ತಾಯಿಸಿದೆ. ಈ ಕುರಿತು ವಿಧಾನಸಭೆ ಸ್ಪೀಕರ್ ಅವರಿಗೆ ಪತ್ರ ಬರೆದಿರುವ ವಿಪಕ್ಷ ನಾಯಕ ಪ್ರತಾಪ್ ಸಿಂಗ್ ಭಾಜ್ವಾ, ಪ್ರಸಕ್ತ ಅಧಿವೇಶನದಲ್ಲಿ ಎಲ್ಲ ಶಾಸಕರನ್ನು ಡೋಪ್ ಟೆಸ್ಟ್ಗೆ ಗುರಿಪಡಿಸಿಬೇಕು ಎಂದು ಮನವಿ ಮಾಡಿದ್ದಾರೆ.
ಈ ಹಿಂದೆ ಭಗವಂತ್ ಮಾನ್ ವಿರುದ್ಧ ಕುಡಿದ ಮತ್ತಿನಲ್ಲಿ ಗುರುದ್ವಾರಕ್ಕೆ ಭೇಟಿ ನೀಡಿದ ಆರೋಪ ಕೇಳಿಬಂದಿತ್ತು. ಈಗ ವಿಧಾನಸಭೆಗೆ ಕುಡಿದು ಬಂದ ಆರೋಪ ಕೇಳಿಬಂದಿದೆ. ಆದರೆ ಭಗವಂತ್ ಮಾನ್ ಈ ಆರೋಪಗಳನ್ನು ನಿರಾಕರಿಸಿದ್ದು, ವಿಪಕ್ಷಗಳು ತಮ್ಮ ಚಾರಿತ್ರ್ಯಹರಣ ಮಾಡಲು ಪ್ರಯತ್ನಿಸುತ್ತಿವೆ ಎಂದು ಕಿಡಿಕಾರಿದ್ದಾರೆ.
























