ಮೃತದೇಹದಲ್ಲಿ ಪ್ರಬಲ ವಿಷಕಾರಿ ಅಂಶ ಪತ್ತೆಯಾದ ಬಳಿಕ ಜಟಿಲಗೊಂಡ ಪ್ರಕರಣ
ಮುಂಬೈ: ಮುಂಬೈಯ ಒಂದೇ ಕುಟುಂಬದ ನಾಲ್ಕು ಮಂದಿ ಇತ್ತೀಚೆಗೆ ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಸೇವಿಸಿದ ಬೆನ್ನಿಗೆ ಮೃತಪಟ್ಟ ಘಟನೆ ದೇಶಾದ್ಯಂತ ಆತಂಕ ಸೃಷ್ಟಿಸಿತ್ತು. ಆದರೆ ಒಂದೇ ಕುಟುಂಬದ ನಾಲ್ವರ ಸಾವಿಗೆ ಕಲ್ಲಂಗಡಿ ಹಣ್ಣು ಕಾರಣವಲ್ಲ ಎಂಬುದಾಗಿ ವೈದ್ಯಕೀಯ ವರದಿ ತಿಳಿಸಿದೆ. ಕಳೆದ ವಾರ ಮುಂಬೈನಲ್ಲಿ ತಂದೆ, ತಾಯಿ ಉತ್ತು ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದು, ಇವರ ಸಾವಿಗೆ ಕಲುಷಿತ ಕಲ್ಲಂಗಡಿ ಕಾರಣ ಎಂದು ಹೇಳಲಾಗಿತ್ತು. ಇದು ಹಣ್ಣಿನ ಸುರಕ್ಷಿತ ಸೇವನೆಯ ಕುರಿತು ಚರ್ಚೆಗಳನ್ನು ಹುಟ್ಟುಹಾಕಿತ್ತು. ಆದರೆ ಇದೀಗ ವೈದ್ಯಕೀಯ ವರದಿಯಲ್ಲಿ ಮೃತರದೇಹದಲ್ಲಿ ಪ್ರಬಲ ನೋವು ನಿವಾರಕವಾದ ಮಾರ್ಫಿನ್ ಪತ್ತೆಯಾಗಿದ್ದು, ಇದರಿಂದ ಸಾವು ಉಂಟಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮೊಬೈಲ್ ಪರಿಕರಗಳ ಅಂಗಡಿ ನಡೆಸುತ್ತಿದ್ದ ಅಬ್ದುಲ್ಲಾ ದೋಕಾಡಿಯಾ (45) ಮತ್ತು ಅವರ ಪತ್ನಿ ನಸ್ರೀನ್ (35) ಮಕ್ಕಳಾದ ಜೈನಾಬ್ (13) ಮತ್ತು ಆಯೇಷಾ (16) ಐವರು ಸಂಬಂಧಿಕರೊಂದಿಗೆ ಭೋಜನ ಕೂಟವನ್ನು ಆಯೋಜಿಸಿದ್ದರು. ಎಲ್ಲರೂ ಮಟನ್ ಬಿರಿಯಾನಿ ತಿಂದಿದ್ದರು. ಸಂಬಂಧಿಕರು ಹೋದ ಬಳಿಕ ಕುಟುಂಬ ಸದಸ್ಯರು ರಾತ್ರಿ 1 ಗಂಟೆ ಸುಮಾರಿಗೆ ಕಲ್ಲಂಗಡಿ ಹಣ್ಣನ್ನು ತಿಂದಿದ್ದು, ಬೆಳಗ್ಗೆ 5 ಗಂಟೆ ಸುಮಾರಿಗೆ ಅಸ್ವಸ್ಥರಾಗಿದ್ದಾರೆ. ಎಲ್ಲರಲ್ಲೂ ವಾಂತಿ, ಅತಿಸಾರ ಕಂಡುಬಂದಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಅವರು ಸಾವನ್ನಪ್ಪಿದ್ದರು.
ಆರಂಭಿಕ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಮೃತರ ಮೆದುಳು, ಹೃದಯ ಮತ್ತು ಕರುಳುಗಳು ಸೇರಿದಂತೆ ಕೆಲವು ಅಂಗಗಳು ಹಸಿರು ಬಣ್ಣಕ್ಕೆ ತಿರುಗಿವೆ. ಇದು ಆಹಾರ ವಿಷದ ಪ್ರಕರಣವಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಬ್ದುಲ್ಲಾ ದೋಕಾಡಿಯಾ ಅವರ ದೇಹದಲ್ಲಿ ಪ್ರಬಲ ನೋವು ನಿವಾರಕವಾದ ಮಾರ್ಫಿನ್ ಪತ್ತೆಯಾಗಿದೆ. ಇದು ಈಗ ಅನುಮಾನಾಸ್ಪದ ಸಾವಿನ ಕುರಿತು ತನಿಖೆ ನಡೆಸಲು ಪೊಲೀಸರನ್ನು ಪ್ರೇರೇಪಿಸಿದೆ. ಒಂದೇ ಕುಟುಂಬದ ನಾಲ್ವರ ಸಾವಿಗೆ ಕಲ್ಲಂಗಡಿಗೆ ಸಂಬಂಧವಿದೆಯೇ ಎನ್ನುವ ಕುರಿತು ವೈಜ್ಞಾನಿಕ ದೃಢೀಕರಣದ ಅನಂತರವೇ ತೀರ್ಮಾನಗಳನ್ನು ತೆಗೆದುಕೊಳ್ಳುವುದಾಗಿ ರಾಜ್ಯ ಆಹಾರ ಮತ್ತು ಔಷಧ ಆಡಳಿತ ತಿಳಿಸಿದ್ದು, ಅಂತಿಮ ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಮುಂಬೈನ ಜೆಜೆ ಮಾರ್ಗ್ ನಿವಾಸದಲ್ಲಿ ವಾಸವಾಗಿದ್ದ ಅಬ್ದುಲ್ಲಾ, ನಸ್ರೀನ್, ಜೈನಾಬ್ ಮತ್ತು ಆಯೇಷಾ ಅವರು ಏಪ್ರಿಲ್ 25ರಂದು ಅಸ್ವಸ್ಥರಾಗಿ ಸಾವನ್ನಪ್ಪಿದ್ದರು. ಇವರ ಸಾವಿಗೆ ಬಿರಿಯಾನಿ ಅಥವಾ ಕಲ್ಲಂಗಡಿ ಕಾರಣವಾಗಿರಬಹುದು ಎಂದು ಶಂಕಿಸಲಾಗಿತ್ತು. ಈ ಘಟನೆ ಹಿನ್ನೆಲೆಯಲ್ಲಿ ಮಾಂಸಾಹಾರ ಸೇವನೆಯ ಬಳಿಕ ಕಲ್ಲಂಗಡಿ ಸೇವಿಸಲು ಜನರು ಹೆದರುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಆರೋಗ್ಯ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.
























