ದೇವಸ್ಥಾನದ ಉತ್ಸವಕ್ಕೆ ಕರೆತಂದ ಆನೆಗೆ ಮದವೇರಿ ರಂಪಾಟ : ಮಾವುತ ಬಲಿ, ಸಹ ಮಾವುತ ಗಂಭೀರ

ಕೆರಳಿದ ಆನೆಯ ಅಟ್ಟಹಾಸಕ್ಕೆ ಸಿಲುಕಿ ಕಾರು, ದ್ವಿಚಕ್ರ ವಾಹನ ಧ್ವಂಸ

ತಿರುವನಂತಪುರಂ: ಎರ್ನಾಕುಳಂ ಜಿಲ್ಲೆಯ ಅಂಗಾಮಾಲಿಯ ಕಿದಂಗೂರ್ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ಇಂದು ಮದವೇರಿದ ಆನೆಯೊಂದು ಅಟ್ಟಹಾಸಗೈದಾಗ ಆನೆಯ ತುಳಿತಕ್ಕೆ ಸಿಲುಕಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಾವುತನ ಸ್ಥಿತಿ ಗಂಭೀರವಾಗಿದೆ.

ಅಕ್ಕಪಕ್ಕದ ದೇವಸ್ಥಾನಗಳ ಉತ್ಸವದಲ್ಲಿ ಪಾಲ್ಗೊಳ್ಳಲು ‘ಮಯ್ಯನಾಡ್ ಪಾರ್ಥಸಾರಥಿ’ ಹೆಸರಿನ ಆನೆಯನ್ನು ಕರೆತರಲಾಗಿತ್ತು. ಇಂದು ಬೆಳಗ್ಗೆ ಸುಮಾರು 9.30ರ ಸುಮಾರಿಗೆ ಆನೆಯನ್ನು ಸ್ನಾನ ಮಾಡಿಸಲು ಕಿದಂಗೂರ್ ದೇವಸ್ಥಾನಕ್ಕೆ ಕರೆತಂದಾಗ ಅದು ಇದ್ದಕ್ಕಿದ್ದಂತೆ ಮದವೇರಿ ಗಲಾಟೆ ಮಾಡಲು ಆರಂಭಿಸಿದೆ.





















































 
 

ಆನೆಯನ್ನು ಲಾರಿಯಲ್ಲಿ ಕರೆತಂದಿದ್ದ ಕೊಲ್ಲಂ ನಿವಾಸಿ ವಿಷ್ಣು ಎಂಬುವವರು ಅದನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾಗ ಆನೆ ಅವರ ಮೇಲೆರಗಿ ತುಳಿದು ಸಾಯಿಸಿದೆ.
ಆನೆಯ ಎರಡನೇ ಮಾವುತ ಪ್ರದೀಪ್ ಅವರಿಗೂ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಅಂಕಮಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುಮಾರು ಮೂರು ಗಂಟೆಗಳ ಕಾಲ ಅಟ್ಟಹಾಸ ಮೆರೆದ ಆನೆಯು ದೇವಸ್ಥಾನದ ಆವರಣದಲ್ಲಿದ್ದ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಪುಡಿಪುಡಿ ಮಾಡಿದೆ. ಆನೆಯ ಆಕ್ರೋಶ ಕಂಡು ಭಕ್ತರು ಹಾಗೂ ಸ್ಥಳೀಯರು ಪ್ರಾಣಭಯದಿಂದ ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ತಂಡ ಮತ್ತು ಪಶು ವೈದ್ಯರು ಸತತ ಕಾರ್ಯಾಚರಣೆ ನಡೆಸಿ ಮಧ್ಯಾಹ್ನ ಆನೆಗೆ ಅರಿವಳಿಕೆ ಮದ್ದು ನೀಡುವ ಮೂಲಕ ಕೊನೆಗೂ ಅದನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!
Scroll to Top