ಬೆಂಗಳೂರು: ಬೆಂಗಳೂರಿನ ದಾಸರಹಳ್ಳಿಯ ಎಂಟನೇ ಮೈಲಿ ಬಳಿಯ ಹಾವನೂರಿನಲ್ಲಿರುವ ಚಿನ್ನದಂಗಡಿಯೊಂದಕ್ಕೆ ಗೋಡೆ ಕೊರೆದು ಕನ್ನ ಹಾಕಿರುವ ಕಳ್ಳರು ಕೋಟಿಗಟ್ಟಲೆ ಬೆಲೆಬಾಳುವ ಬೆಳ್ಳಿ ಆಭರಣಗಳನ್ನು ಕಳವುಗೈದಿದ್ದಾರೆ. ಎಂಬಿ ಜ್ಯುವೆಲ್ಲರ್ಸ್ ಅಂಗಡಿಯಿಂದ ಸುಮಾರು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ಕದ್ದಿದ್ದಾರೆ.
ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಅತ್ಯಂತ ಯೋಜಿತವಾಗಿ ಕಳ್ಳತನ ಮಾಡಲಾಗಿದೆ. ಜ್ಯುವೆಲ್ಲರಿ ಶಾಪ್‌ನ ಹಿಂಭಾಗದ ರೂಮ್‌ನ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ನಂತರ ಗೋಡೆಯನ್ನು ಕೊರೆದು ಮಳಿಗೆಯೊಳಗೆ ಪ್ರವೇಶಿಸಿ ಸುಮಾರು 70 ಕೆಜಿ ಬೆಳ್ಳಿ ವಸ್ತುಗಳ್ಳನ್ನು ಕದ್ದಿದ್ದಾರೆ.
ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಳಿಗೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಕಳ್ಳರು ಗೋಡೆ ಕೊರೆಯಲು ಬಳಸಿದ ವಿಧಾನಗಳನ್ನು ಪೊಲೀಸರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.
























