ಪುತ್ತೂರು: ಒಳ ರೋಗಿಯಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊಡಿಂಬಾಡಿಯ ದಾರಂದಕುಕ್ಕು ನಿವಾಸಿ ಲಕ್ಷ್ಮೀ (80) ಎಂಬ ವೃದ್ಧೆಗೆ ಪುನರ್ವಸತಿ ಕಲ್ಪಿಸಿ ಮಾನವೀಯತೆ ಮೆರೆದ ಹೃದಯಸ್ಪರ್ಶಿ ಘಟನೆ ನಡೆದಿದೆ.
ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸಾಯುವ ಸ್ಥಿತಿಗೆ ತಲುಪಿದ್ದ ಲಕ್ಷ್ಮೀ ಅಮ್ಮನಿಗೆ ಸರ್ಕಾರಿ ಆಸ್ಪತ್ರೆಯ ಡಾ. ಯದುರಾಜ್ ಡಿ. ಕೆ. ಅವರ ತಂಡ ಸೂಕ್ತ ಚಿಕಿತ್ಸೆ ನೀಡಿದ್ದು, ಇದರಿಂದ ಆ ತಾಯಿ ಚೇತರಿಸಿಕೊಂಡು ನಡೆದಾಡುವ ಸ್ಥಿತಿಗೆ ಬಂದಿದ್ದಾರೆ.
ಆ ಬಳಿಕ ಲಕ್ಷ್ಮೀ ಅಮ್ಮನನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳ ಮನವಿಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಹರೀಶ್.ಕೆ ಹಾಗೂ ಸಹಾಯಕ ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ವಿಕಲಚೇತನರ ನೋಡೆಲ್ ಅಧಿಕಾರಿಯಾದ ಶ್ರೀಮತಿ ಮಂಗಳ ಕಾಳೆಯವರ ಮಾರ್ಗದರ್ಶನದಲ್ಲಿ. ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ವೃದ್ಧೆಯನ್ನು ಪುತ್ತೂರು ಕಸಬಾ ಗ್ರಾಮದ ಕರೆಮುಲೆ ದೀಪಶ್ರೀ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ.
ಅಕ್ಕ ಪಡೆಯ ಸಿಬ್ಬಂದಿ ಸಂಧ್ಯಾ, ನವ್ಯ, ರೇವತಿ, ಚಾಲಕ ನವಾಜ್ ಬಡ್ತಿ ಅವರು ವೃದ್ಧ ತಾಯಿಯನ್ನು ಕೈ ಹಿಡಿದು ಆಶ್ರಮಕ್ಕೆ ಸೇರಿಸಿದ್ದಾರೆ. ನವಾಜ್ ಬಡ್ತಿ ಅವರು ತಮ್ಮ ದುಡಿಮೆಯ ಒಂದು ಭಾಗವನ್ನು ಆ ತಾಯಿಯ ಖರ್ಚಿಗೆ ನೀಡಿ ಮಾದರಿಯಾಗಿದ್ದಾರೆ.
ಬೆಂಗಳೂರಿನ ದೀಪಶ್ರೀ ಆಸ್ಪತ್ರೆಯ ಡಾ. ಶ್ರೀಧರ್ ಅವರು ಶುಲ್ಕ ರಹಿತವಾಗಿ ಅವರನ್ನು ಆಶ್ರಮಕ್ಕೆ ಸೇರಿಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ಆಶ್ರಮಕ್ಕೆ ತೆರಳುವ ವೇಳೆ ಲಕ್ಷ್ಮೀ ಅಮ್ಮ ಅವರು ಪುತ್ತೂರಿನ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದ್ದಾರೆ

























