ಬೌರಿಂಗ್‌ ಆಸ್ಪತ್ರೆ ಗೋಡೆ ಕುಸಿತ : ಪ್ರವಾಸಕ್ಕೆ ಬಂದವರ ದುರಂತ ಅಂತ್ಯ

ಮಳೆಯಿಂದ ರಕ್ಷಣೆ ಪಡೆಯಲು ಆಶ್ರಯಿಸಿದ ಗೋಡೆಯೇ ಮೃತ್ಯುವಾಯಿತು

ಬೆಂಗಳೂರು: ಬುಧವಾರ ಸಂಜೆ ಸುರಿದ ರಣಮಳೆಯಿಂದಾಗಿ ಬೆಂಗಳೂರಿನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಬಳಿ ಸಂಭವಿಸಿದ ಗೋಡೆ ಕುಸಿತದ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ 7 ಮಂದಿ ದುರ್ಮರಣಕ್ಕೀಡಾಗಿದ್ದು, ಈ ದುರಂತ ಆಡಳಿತ ವ್ಯವಸ್ಥೆಯ ವಿರುದ್ಧ ಜನ ಆಕ್ರೋಶಿತರಾಗುವಂತೆ ಮಾಡಿದೆ.

ನಿನ್ನೆ ಸಂಜೆ ನಗರದಾದ್ಯಂತ ದಿಢೀರ್ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದು, ಮಳೆಯ ಆರ್ಭಟಕ್ಕೆ ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಗೋಡೆಯ ಪಕ್ಕದಲ್ಲೇ ಆಶ್ರಯ ಪಡೆದಿದ್ದ ಮತ್ತು ವ್ಯಾಪಾರ ಮಾಡುತ್ತಿದ್ದ ಸಾರ್ವಜನಿಕರ ಮೇಲೆ ಅವಶೇಷಗಳು ಬಿದ್ದಿದ್ದರಿಂದ ಈ ಸಾವು-ನೋವು ಸಂಭವಿಸಿದೆ.























































 
 

ಕೇರಳದಿಂದ ಬೆಂಗಳೂರಿಗೆ ಪ್ರವಾಸ ಬಂದಿದ್ದ ಒಂದು ತಂಡದ ಕೆಲವರು ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ಆಶ್ರಯಿಸಿದ್ದ ಗೋಡೆಯೇ ಅವರ ಪಾಲಿಗೆ ಮೃತ್ಯುವಾಗಿ ಪರಿಣಮಿಸಿದೆ.

ಈ ಭೀಕರ ಅವಘಡಕ್ಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ನೇರ ಕಾರಣ ಎನ್ನಲಾಗುತ್ತಿದೆ. ಕುಸಿದು ಬಿದ್ದ ಕಾಂಪೌಂಡ್ ಗೋಡೆ ಸುಮಾರು 30 ವರ್ಷಗಳಷ್ಟು ಹಳೆಯದಾಗಿದ್ದು, ತೀವ್ರವಾಗಿ ಶಿಥಿಲಗೊಂಡಿತ್ತು. ಹಳೆಯ ಕಟ್ಟಡಗಳು ಮತ್ತು ಕುಸಿಯುವ ಹಂತದಲ್ಲಿರುವ ಗೋಡೆಗಳ ಬಗ್ಗೆ ಜಿಬಿಎ ಅಧಿಕಾರಿಗಳು ಗಮನಹರಿಸಬೇಕಿತ್ತು. ಆದರೆ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರಲಿಲ್ಲ.

ಆಸ್ಪತ್ರೆಯ ಪಕ್ಕದಲ್ಲಿ ನಡೆಯುತ್ತಿದ್ದ ಕಾಮಗಾರಿಗಾಗಿ ಮಣ್ಣನ್ನು ತಂದು ಗೋಡೆಯ ಪಕ್ಕದಲ್ಲೇ ಹಾಕಲಾಗಿತ್ತು. ಮಳೆಯಿಂದಾಗಿ ಮಣ್ಣು ತೇವಾಂಶ ಭರಿತವಾಗಿ ಭಾರ ಹೆಚ್ಚಾದ ಕಾರಣ ಗೋಡೆ ಕುಸಿದಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಬೀದಿ ವ್ಯಾಪಾರಿಗಳಿಗೆ ಸ್ಥಳಾವಕಾಶ ಕೂಡ ಜಿಬಿಎನಿಂದಲೇ ಆಗುತ್ತದೆ. ಈ ವೇಳೆಯೂ ಗಮನಕ್ಕೆ ಬರಲಿಲ್ಲವೇ ಎನ್ನುವುದು ಅಚ್ಚರಿ ಮೂಡಿಸಿದೆ. ಬಹಳ ಮುಖ್ಯವಾಗಿ ಗೋಡಿ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಸ್ಥಳೀಯರು ಈಗಾಗಲೇ ದೂರು ನೀಡಿದ್ದರೂ ಅಧಿಕಾರಿಗಳು, ಶಾಸಕರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈ ಘಟನೆ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್. ಅಶೋಕ್, ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. “ಐವರು ಕಮಿಷನರ್‌ಗಳಿದ್ದರೂ ನಗರದ ರಕ್ಷಣೆ ಸಾಧ್ಯವಾಗುತ್ತಿಲ್ಲ. ಸಿಎಂ ಮತ್ತು ಡಿಸಿಎಂ ದೆಹಲಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದು, ಬೆಂಗಳೂರಿನ ಜನರ ಸಂಕಷ್ಟ ಕೇಳುವವರಿಲ್ಲ. ಈ ಘಟನೆಗೆ ಸರ್ಕಾರವೇ ನೇರ ಹೊಣೆ” ಎಂದು ಆರೋಪಿಸಿದ್ದಾರೆ.

ಈ ನಡುವೆ ಆಸ್ಪತ್ರೆಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖದ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಬೌರಿಂಗ್ ಆಸ್ಪತ್ರೆಗೆ ಶಿವಕುಮಾರ್ ಬುಧವಾರ ರಾತ್ರಿ ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏಳು ಜನ ಮೃತಪಟ್ಟಿದ್ದು, ಅದರಲ್ಲಿ 4 ಜನ ಬೀದಿ ಬದಿ ವ್ಯಾಪಾರಿಗಳು, ಇಬ್ಬರು ಕೇರಳದವರು. ಒಂದು ಮಗು ಸಾವನ್ನಪ್ಪಿದ್ದು, ಒಬ್ಬರ ಗುರುತು ಇನ್ನೂ ಸಿಕ್ಕಿಲ್ಲ. ಚಪ್ಪಲಿ ವ್ಯಾಪಾರಿ, ಬಟ್ಟೆ ವ್ಯಾಪಾರಿ ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ಕೇರಳದಿಂದ ಬಂದವರು ಮೃತಪಟ್ಟಿದ್ದಾರೆ ಎಂದರು.

ಮರಗಳು, ಕೊಂಬೆಗಳು ಬಿದ್ದು ವಾಹನಗಳಿಗೂ ಹಾನಿಯಾಗಿದೆ. ನಾಳೆಯಿಂದಲೇ ದುರ್ಬಲ ಕೊಂಬೆಗಳನ್ನು ತೆರವುಗೊಳಿಸಲು ನಾನು ನಿರ್ದೇಶನ ನೀಡಿರುವೆ. ನಗರದಲ್ಲಿ ನೂರಕ್ಕೂ ಹೆಚ್ಚು ಕಡೆ ಮರ ಬಿದ್ದಿದ್ದು, ಅಪಾಯಕಾರಿಯಾಗಿರುವ ಮರ ಹಾಗೂ ಕೊಂಬೆಗಳನ್ನು ಗುರುತಿಸಿ, ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನು ಕನಕಪುರದಿಂದ ಮರಳುವಾಗಲೂ ಅನೇಕ ಕಡೆಗಳಲ್ಲಿ ಮರ ಬಿದ್ದಿರುವುದನ್ನು ಗಮನಿಸಿದೆ ಎಂದು ಹೇಳಿದರು.

ಕೇರಳದ ಕುಟುಂಬಶ್ರೀ ಎನ್ನುವ ಸಂಸ್ಥೆಯ ಮುಖಾಂತರ 56 ಮಂದಿ ಪ್ರವಾಸಕ್ಕೆ ಬಂದು ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಶಾಪಿಂಗ್‌ ಮಾಡುತ್ತಿದ್ದರು. ಆಗ ಮಳೆ ಬಂದಿದೆ. ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಆಗ ಅವರು ಮಳೆಯಿಂದ ರಕ್ಷಣೆ ಪಡೆಯಲು ಗೋಡೆ ಪಕ್ಕ ಹೋಗಿದ್ದಾರೆ. ಆಗ 8 ಅಡಿ ಎತ್ತರದ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಪ್ರೀತಿ, ಶೈಜಾ, ಶಿಜು ಎನ್ನುವ ಮೂವರು ಗಾಯಗೊಂಡಿದ್ದರು. ಈಗ ಚೇತರಿಸಿಕೊಂಡಿದ್ದಾರೆ ಎಂದರು.

ಲತಾ ಮತ್ತು ಸ್ಪೃತಿ ಮೃತಪಟ್ಟಿದ್ದಾರೆ. ಇವರೆಲ್ಲಾ ನ್ಯೂಟ್ರಿಷಿಯನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು. ಸರ್ಕಾರದ ಅಧಿಕಾರಿಗಳು ಸಹ ಇವರ ಜೊತೆ ಬಂದಿದ್ದಾರೆ. ಕೇರಳ ಸರ್ಕಾರಕ್ಕೂ ನಾವು ಮಾಹಿತಿ ನೀಡುತ್ತೇವೆ. ಶವ ಪರೀಕ್ಷೆ ನಡೆಸಿ ಇಲ್ಲಿಂದಲೇ ಗೌರವಯುತವಾಗಿ ಅವರನ್ನು ಕಳಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಸರ್ಕಾರದ ವೈಫಲ್ಯ ಎನ್ನುವ ಬಿಜೆಪಿಯವರ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, ವಿರೋಧ ಪಕ್ಷದವರು ಹೇಳಿದ್ದನ್ನೇ ಹೇಳುತ್ತಾರೆ. ಅವರಿಗೆ ಇನ್ನೇನು ಹೇಳುವುದು. ಅವರುಗಳು ಏನೂ ಸಹಾಯ ಮಾಡುವುದಿಲ್ಲ. ಟೀಕೆ ಮಾಡಬೇಕು, ದೂರಬೇಕು. ಮಾಧ್ಯಮಗಳ ಮುಂದೆ ಏನೋ ಒಂದು ಮಾತನಾಡಬೇಕು. ನಾವು ಏನಾದರೂ ಪರಿಹಾರ ಕಂಡು ಹಿಡಿಯಬೇಕು ಎಂದು ನಾವು ಆಲೋಚಿಸುತ್ತಿದ್ದೇವೆ ಎಂದರು.

ಇದು ಜಿಬಿಎ ಅಧಿಕಾರಿಗಳ ವೈಫಲ್ಯವಲ್ಲವೇ ಎಂದು ಕೇಳಿದಾಗ, ಇದು ನೂರು ವರ್ಷಗಳ ಹಳೆಯ ಆಸ್ಪತ್ರೆ. ಹೊಸ ಆಸ್ಪತ್ರೆಯಲ್ಲ. ಈ ಭಾಗವನ್ನು ಸರಿಯಾದ ರೀತಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಈ ದುರ್ಘಟನೆ ಸಂಭವಿಸಿದೆ. ಇದು ಜಿಬಿಎಗೆ ಸಂಬಂಧಿಸಿಲ್ಲ ಎಂದು ತಿಳಿಸಿದರು.

error: Content is protected !!
Scroll to Top