ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿಸಿದ ಪಶ್ಚಿಮ ಬಂಗಾಳದ ಚುನಾವಣಾ ಸಮೀಕ್ಷೆ

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ರಾಜ್ಯದಲ್ಲಿ ಈ ಸಲವೂ ನಿರಾಶೆ ಕಾದಿದೆಯೇ?

ನವದೆಹಲಿ: ಪಂಚರಾಜ್ಯಗಳ ಚುನಾವಣೆಗಳು ಮುಗಿದ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು 3 ರಾಜ್ಯಗಳಲ್ಲಿ ಯಥಾಸ್ಥಿತಿ ಮುಂದುವರಿಯುವ, ಕೇರಳದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಮರಳುವ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ತುರುಸಿನ ಹೋರಾಟದ ಸುಳಿವು ನೀಡಿವೆ.

ಈ ಪೈಕಿ ಎಲ್ಲರಲ್ಲೂ ಭಾರಿ ಕುತೂಹಲ ಹುಟ್ಟಿಸಿರುವುದು ಪಶ್ಚಿಮ ಬಂದಾಳದ ಭವಿಷ್ಯ. ಮಮತಾ ಬ್ಯಾನರ್ಜಿಯ 15 ವರ್ಷಗಳ ಆಡಳಿತವನ್ನು ಕೊನೆಗಾಣಿಸಲು ಬಿಜೆಪಿ ತನ್ನ ಸರ್ವ ಸಾಮರ್ಥ್ಯವನ್ನು ಬಳಸಿ ಇಲ್ಲಿ ಹೋರಾಡಿದೆ. ಒಂದು ಹಂತದಲ್ಲಿ ಬಿಜೆಪಿ ಗೆಲುವು ನಿರಾಯಾಸ ಎಂಬ ಭಾವನೆ ಇತ್ತು. ಆದರೆ ಸಮೀಕ್ಷೆಗಳ ಜಿದ್ದಾಜಿದ್ದಿನ ಸ್ಪರ್ಧೆಯ ಸುಳಿವು ನೀಡಿರುವುದು ಮತ್ತು ಒಂದೆರಡು ಸಮೀಕ್ಷೆಗಳು ಟಿಎಂಸಿಯೇ ಮರಳಿ ಅಧಿಕಾರಕ್ಕೆ ಬರಲಿದೆ ಎಂದಿರುವುದು ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿಸಿದೆ.























































 
 

ಪಶ್ಚಿಮ ಬಂಗಾಳಲ್ಲಿ ಈ ಬಾರಿ ಟಿಎಂಸಿ ಕೋಟೆಯನ್ನು ಛಿದ್ರಗೊಳಿಸಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು 4 ಸಮಿಕ್ಷೆಗಳು ಹೇಳಿದ್ದರೆ 2 ಸಮೀಕ್ಷೆಗಳು ಸತತ 4ನೇ ಬಾರಿಗೆ ಮಮತಾ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಕಳೆದ ಚುನಾವಣೆಯಲ್ಲೂ ಸಮೀಕ್ಷೆಗಳು ಬಿಜೆಪಿ ಗೆಲುವಿನ ಭವಿಷ್ಯ ನುಡಿದಿದ್ದವಾದರೂ ಅದು ಸುಳ್ಳಾಗಿತ್ತು. ಹೀಗಾಗಿ ಈ ಬಾರಿ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಮೂಡಿದೆ.

ಡಿಎಂಕೆ, ಅಣ್ಣಾಡಿಎಂಕೆ ಮತ್ತು ವಿಜಯ್‌ ಅವರ ಟಿವಿಕೆ ನಡುವಿನ ಕದನಕ್ಕೆ ಸಾಕ್ಷಿಯಾಗಿದ್ದ ತಮಿಳುನಾಡಲ್ಲಿ ಡಿಎಂಕೆ ಕುರ್ಚಿ ಭದ್ರವಾಗಿದೆ ಎಂದು 6 ಸಮೀಕ್ಷೆಗಳು ಸುಳಿವು ನೀಡಿದ್ದರೆ, 1 ಸಮೀಕ್ಷೆ ಅಣ್ಣಾಡಿಎಂಕೆ- ಬಿಜೆಪಿ ಕೂಟದ ಗೆಲುವಿನ ಭವಿಷ್ಯ ನುಡಿದಿವೆ. ಭಾರಿ ಅಬ್ಬರ ಮೂಡಿಸಿದ್ದ ವಿಜಯ್‌ ಅವರ ಟಿವಿಕೆ ಪಕ್ಷ ಹೆಚ್ಚೇನೂ ಸಾಧನೆ ಮಾಡದು ಎಂದು 5 ಸಮೀಕ್ಷೆಗಳು ಹೇಳಿದ್ದರೆ, ಒಂದು ಸಮೀಕ್ಷೆ ಮಾತ್ರ ವಿಜಯ್‌ ಪಕ್ಷ 120 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ.

ಅಸ್ಸಾಂ ವಿಧಾನಸಭೆಯ 126 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬುಧವಾರ ಪ್ರಕಟವಾದ ಬಹುತೇಕ ಚುನಾವಣಾ ಸಮೀಕ್ಷೆಗಳು ಹೇಳಿವೆ. ಇದು ಖಚಿತವಾದರೆ ಹಾಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.

ಸತತ 10 ವರ್ಷಗಳಿಂದ ಆಳಿದ್ದ, ಹಲವು ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಿದ್ದ ಕೇರಳದಲ್ಲಿ ಎಡಪಕ್ಷಗಳ ಎಲ್‌ಡಿಎಫ್‌ ಮೈತ್ರಿಕೂಟ ಈ ಬಾರಿ ಅಧಿಕಾರ ಕಳೆದುಕೊಳ್ಳಲಿದೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಕೂಟ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಈ ನಡುವೆ ಕಳೆದ ಬಾರಿ ರಾಜ್ಯ ವಿಧಾನಸಭೆಯಲ್ಲಿ ಒಂದೂ ಸ್ಥಾನ ಹೊಂದಿರದಿದ್ದ ಬಿಜೆಪಿ ಈ ಬಾರಿ ದಾಖಲೆಯ 10-14 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿವೆ.

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್‌(ಎಐಎನ್‌ಆರ್‌ಸಿ) ಮತ್ತು ಬಿಜೆಪಿ ಕೂಟ ಅಧಿಕಾರಕ್ಕೆ ಮರಳಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಮೂಲಕ ಇನ್ನೊಂದು ವರ್ಷವೂ ಈ ಕೂಟದ ಆಡಳಿತವೇ ನಡೆಯಲಿದೆ.

error: Content is protected !!
Scroll to Top