ಬೆಳ್ತಂಗಡಿ: ಶ್ರೀ ಶಾರದಾಂಬ ಯಕ್ಷಗಾನ ಕಲಾ ಬಳಗದ ವತಿಯಿಂದ ಯಕ್ಷಗಾನ ಬಣ್ಣಗಾರಿಕೆ ಕಲಿಕಾ ಶಿಬಿರವು ಗುರುವಾಯನಕೆರೆ ಶ್ರೀ ಶಾರದಾಂಬ ಭಜನಾ ಮಂಡಳಿಯಲ್ಲಿ ಜರಗಿತು.
ಭಾಗವತ ದೇವಿಪ್ರಸಾದ್, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಶ್ರೇಯಸ್ ವಾಮದಪದವು, ಕೇಶವ ಹಿಮ್ಮೇಳದಲ್ಲಿ ಚೌಕಿ ಪೂಜೆ ನಡೆಸಿ, ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಂದ ಪೂರ್ವರಂಗದ ಪ್ರಾತ್ಯಕ್ಷಿಕೆ ನಡೆಯಿತು.

ಕೊಡಮಣಿತ್ತಾಯ ದೈವಸ್ಥಾನ ಅರಮಲೆ ಬೆಟ್ಟ ಅನುವಂಶಿಕ ಮೊಕ್ತೇಸರ ಸುಕೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾ ಬಳಗದಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಉತ್ತಮ ಕಲಾವಿದರಾಗಿ ರೂಪುಗೊಳ್ಳುವಂತಾಗಲು ಶಿಬಿರವು ಪ್ರೇರಣೆ ನೀಡಲಿ ಎಂದರು.
ಬೆಳ್ತಂಗಡಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕದ ಟ್ರಸ್ಟಿ, ಲಯನ್ ದೇವಿದಾಸ ಶೆಟ್ಟಿ ಬದ್ಯಾರು, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರದೀಪ ಶೆಟ್ಟಿ ಶಕ್ತಿ ನಗರ, ಆನಂದ ಶೆಟ್ಟಿ ಶಕ್ತಿನಗರ ಶುಭ ಹಾರೈಸಿದರು.
ಶ್ರೀ ಶಾರದಾಂಬ ಭಜನಾ ಮಂಡಳಿ ಅಧ್ಯಕ್ಷೆ ಕುಸುಮಾವತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಯಕ್ಷಗಾನ ಮತ್ತು ಬಣ್ಣಗಾರಿಕೆ ಎಂಬ ವಿಚಾರದಲ್ಲಿ ಯಕ್ಷಗಾನ ಕಲಾವಿದ ದಿವಾಕರ ಆಚಾರ್ಯ ಗೇರುಕಟ್ಟೆ ಉಪನ್ಯಾಸ ನೀಡಿ, ಕಲಾವಿದನಾಗಲು ಯಕ್ಷಗಾನದ ಚತುರ್ವಿಧಗಳಾದ ಆಂಗಿಕ, ಸಾತ್ವಿಕ, ಆಹಾರ್ಯ ಮತ್ತು ವಾಚಿಕದಲ್ಲಿ ಪೂರ್ಣತೆಯನ್ನು ಸಾಧಿಸಬೇಕೆಂದರು.
ಪಿ.ಯು. ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಾಣಿ ಪದವಿ ಪೂರ್ವ ಕಾಲೇಜಿನ ಮತ್ತು ಪಟ್ಲ ಪೌಂಡೇಶನ್ ಯಕ್ಷ ಶಿಕ್ಷಣದ ವಿದ್ಯಾರ್ಥಿಗಳಾದ ರಂಜಿತಾ ಮತ್ತು ಸಾನ್ವಿ ಅವರನ್ನು ಗೌರವಿಸಲಾಯಿತು.
ಕಲಾವಿದ ಪ್ರಭಾಕರ ಶೆಟ್ಟಿ ತೆಂಕಕಾರಂದೂರು ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆಯ ಶಿಬಿರವನ್ನು ನಿರ್ವಹಿಸಿದರು.
ನಾಟ್ಯಗುರು ದೇವಿ ಪ್ರಸಾದ್ ಆಚಾರ್ಯ ಗುರುವಾಯನಕೆರೆ ಕಾರ್ಯಕ್ರಮ ನಿರೂಪಿಸಿ ಸುಧಾಮಣಿ ವಂದಿಸಿದರು. ಗೆಳೆಯರ ಬಳಗ (ರಿ ) ಗುರುವಾಯನಕೆರೆ,ಶ್ರೀ ಶಾರದಾಂಬ ಭಜನಾ ಮಂಡಳಿ ಗುರುವಾಯನಕೆರೆ ಶಿಬಿರಕ್ಕೆ ಸಹಕಾರ ನೀಡಿದರು.

























