ಉಡುಪಿ: ಕೊಡಗಿನ ಹೋಂಸ್ಚೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆಯ ಬಳಿಕ ರಾಜ್ಯದ ಪೊಲೀಸ್ ಇಲಾಖೆ ಹೋಂ ಸ್ಟೇಗಳ ಮೇಲೆ ಹದ್ದಿನ ಕಣ್ಣಿರಿಸಲು ಆರಂಭಿಸಿದೆ.
ಮಾನ್ಯ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಅವರ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿ ನಡೆಸಲಾದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 32 ಅಕ್ರಮ ಹೋಂಸ್ಟೇಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಈ 32 ಅಕ್ರಮ ಹೋಂಸ್ಟೇಗಳ ವಿರುದ್ಧ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯು ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಅಧಿಕೃತ ವರದಿ ಸಹ ನೀಡಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯಾದ್ಯಂತ ಪ್ರವಾಸೋದ್ಯಮ ನಂಬಿ ಜೀವನ ನಡೆಸುತ್ತಿರುವ ಮಾಲೀಕರಿಗೆ ಪೊಲೀಸ್ ಇಲಾಖೆ ಈ ಕೆಳಗಿನ ಪ್ರಮುಖ ಸೂಚನೆಗಳನ್ನು ನೀಡಿದೆ.
ಅದೇನೆಂದರೆ, ಹೋಂಸ್ಟೇ/ರೆಸಾರ್ಟ್‌ಗಳು ಪರವಾನಿಗೆ ನಿಯಮ ಹಾಗೂ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ನಿಯಮ ಹಾಗೂ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವ ಹೋಂಸ್ಟೇ/ರೆಸಾರ್ಟ್ಗಳ ಪರವಾನಿಗೆಯನ್ನು ರದ್ದು ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಹೋಂಸ್ಟೇ/ರೆಸಾರ್ಟ್‌ಗಳಿಗೆ ಯಾವುದೇ ವಿದೇಶಿಯರು ಆಗಮಿಸಿದಾಗ ನಿಯಾಮಾನುಸಾರ ಅವರ ವಿವರಗಳನ್ನು ಒಳಗೊಂಡ Form C & FRRO (Foreigners Regional Registration Office) online ಮೂಲಕ ಅಪ್ಲೋಡ್ ಮಾಡತಕ್ಕದ್ದು. ಈ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡತಕ್ಕದ್ದು. ಹೋಂಸ್ಟೇ/ರೆಸಾರ್ಟ್‌ಗಳಲ್ಲಿ ವಾಸವಾಗಿರುವ ವಿದೇಶಿಯರ ಭದ್ರತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಇತ್ಯಾದಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಮಾಲೀಕರಿಗೆ ಸೂಚಿಸಲಾಗಿದೆ.

























