ಪುತ್ತೂರು: ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಿದ್ದನ್ನು ಪ್ರಶ್ನೆ ಮಾಡಲು ಹೋಗಿದ್ದಕ್ಕೆ ಹಲ್ಲೆ ನಡೆಸಿದ್ದಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಶ್ವರಮಂಗಲದ ಸರೋಳಿಮೂಲೆಯ ಅಬ್ದುಲ್ ರಹಿಮಾನ್ ಕೆ. ಎಂ. ಎನ್ನುವವರು ದೂರು ನೀಡಿರುವುದಾಗಿದೆ.
ಪಡುವನ್ನೂರಿನ ಸಸಿಹಿತ್ತಿಲು ಎಂಬಲ್ಲಿ ತಾನು ಖರೀದಿ ಮಾಡಿದ ಜಾಗದಲ್ಲಿನ ತಡೆ ಗೋಡೆಯ ಮೇಲೆ ಪಿ. ಮಹಮ್ಮದ್ ಎನ್ನುವವರು ಅಕ್ರಮವಾಗಿ ತನ್ನ ಕೆಲಸದಾಳುಗಳಿಂದ ಕಾಂಪೌಂಡ್ ಗೋಡೆ ಕಟ್ಟಿಸುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ ರಹಿಮಾನ್ ಮತ್ತು ಅವರ ತಾಯಿಯ ಮೇಲೆ ಮಹಮ್ಮದ್ ಕಲ್ಲುಗಳಿಂದ ದಾಳಿ ನಡೆಸಿದ್ದು, ಅದು ರಹಿಮಾನ್ ಅವರ ತಾಯಿಯ ಮೇಲೆ ಬಿದ್ದಿದೆ. ಹಾಗೆಯೇ ಕತ್ತಿ ಬೀಸಿದ್ದು ಇದರಿಂದ ಸಹೋದರ ಮಿಖ್ದಾದ್ಗೆ ಹಲ್ಲೆಯಾಗಿದೆ.
ಈ ಬಗ್ಗೆ ಈಶ್ವರ ಮಂಗಲ ಔಟ್ ಪೋಸ್ಟ್ನಲ್ಲಿದ್ದ ಪೊಲೀಸರಿಗೆ ತಿಳಿಸಿ ಬರುವ ಸಮಯದಲ್ಲಿ ಆರೋಪಿ ಜೀವ ಬೆದರಿಕೆ ಒಡ್ಡಿ, ಸ್ಥಳದಿಂದ ಪರಾರಿಯಾಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

























