ಸ್ನಾನಕ್ಕಾಗಿ ನದಿಗಿಳಿದು ನಾಪತ್ತೆಯಾಗಿದ್ದ ಯುವಕ
ಕಡಬ: ಕುಮಾರಧಾರಾ ನದಿಗೆ ಸ್ನಾನಕ್ಕೆ ಇಳಿದಿದ್ದ ಯುವಕನೋರ್ವ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಘಟನೆ ಸೋಮವಾರ ಸಂಜೆ ಸಂಭವಿಸಿದ್ದು, ಯುವಕ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಮೃತ ಯುವಕನನ್ನು ಮರ್ಧಾಳ ನಿವಾಸಿ ಮಂಜು ಎಂಬವರ ಪುತ್ರ ರಕ್ಷಿತ್ (26) ಎಂದು ಗುರುತಿಸಲಾಗಿದೆ.
ರಕ್ಷಿತ್ ಸೋಮವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಐತ್ತೂರು ಗ್ರಾಮದ ಅರಬ್ಬಿ ತೋಡು ಎಂಬಲ್ಲಿ ಸ್ನಾನಕ್ಕಾಗಿ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈಜಲು ತಿಳಿದಿದ್ದರೂ ನೀರಿನ ಸೆಳೆತಕ್ಕೆ ಸಿಲುಕಿದ ರಕ್ಷಿತ್ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಡಬ ಪೊಲೀಸರು ಹಾಗೂ ಪುತ್ತೂರಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಕತ್ತಲಾದ ಕಾರಣ ಶೋಧ ಕಾರ್ಯಕ್ಕೆ ಅಡಚಣೆ ಎದುರಾಗಿದೆ. ರಾತ್ರಿ ವೇಳೆ ಸ್ಥಳಕ್ಕಾಗಮಿಸಿದ ಈಶ್ವರ್ ಮಲ್ಪೆ ಹಾಗೂ ತಂಡ ಶೋಧ ಕಾರ್ಯ ನಡೆಸಿ ಸುಮಾರು 30 ಅಡಿ ಆಳದಲ್ಲಿ ಮೃತದೇಹವನ್ನು ಪತ್ತೆಹಚ್ಚಿದೆ.

























