ಉರಿಬಿಸಿಲಿನಲ್ಲಿ ಅಸ್ಥಿಪಂಜರವನ್ನು ಹೊತ್ತುಕೊಂಡು 3 ಕಿ.ಮೀ. ನಡೆದ ಆದಿವಾಸಿ ಜನಾಂಗದ ವ್ಯಕ್ತಿ
ಭುವನೇಶ್ವರ: ಸಹೋದರಿ ಮೃತಪಟ್ಟಿರುವುದನ್ನು ಸಾಬೀತುಪಡಿಸಲು ಆಕೆಯ ಅಸ್ಥಿಪಂಜರವನ್ನೇ ವ್ಯಕ್ತಿಯೊಬ್ಬರು ಉರಿ ಬಿಸಿಲಿನಲ್ಲಿ 3 ಕಿಲೋಮೀಟರ್ ದೂರ ಹೊತ್ತುಕೊಂಡು ಬ್ಯಾಂಕಿಗೆ ತಂದ ವಿಲಕ್ಷಣ ಘಟನೆಯೊಂದು ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಸಂಭವಿಸಿದೆ.
ಕಿಯೋಂಜಾರ್ ಜಿಲ್ಲೆಯ ಡಯಾನಾಲಿ ಗ್ರಾಮದ ಜಿತು ಮುಂಡಾ ಎಂಬವರ ಸಹೋದರಿ ಕಾಕ್ರಾ ಮುಂಡಾ ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಕಾಕ್ರಾ ಅವರ ಪತಿ ಮತ್ತು ಮಗು ಮೊದಲೇ ಮೃತಪಟ್ಟಿದ್ದರಿಂದ ಜಿತು ಅವರೇ ಬದುಕುಳಿದರುವ ಏಕೈಕ ಸಂಬಂಧಿಯಾಗಿದ್ದರು. ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು ಜಿತು ಬ್ಯಾಂಕ್ ಮ್ಯಾನೇಜರ್ ಅವರನ್ನು ಭೇಟಿ ಮಾಡಿದಾಗ ಖಾತೆದಾರರು ಖುದ್ದಾಗಿ ಬರಬೇಕು ಅಥವಾ ಕಾನೂನುಬದ್ಧ ಉತ್ತರಾಧಿಕಾರಿ ದಾಖಲೆಗಳನ್ನು ನೀಡಬೇಕು ಎಂದು ಬ್ಯಾಂಕ್ ನಿಯಮದ ನೆಪವೊಡ್ಡಿತ್ತು.
ಯಾವುದೇ ಶಿಕ್ಷಣವಿಲ್ಲದ ಮತ್ತು ಬುಡಕಟ್ಟು ಜನಾಂಗದ ಜಿತು ಅವರಿಗೆ ಮರಣ ಪ್ರಮಾಣಪತ್ರ ಪಡೆಯುವ ಅಥವಾ ಉತ್ತರಾಧಿಕಾರ ಪತ್ರದ ಸಂಕೀರ್ಣ ಪ್ರಕ್ರಿಯೆಗಳ ಬಗ್ಗೆ ತಿಳಿದಿರಲಿಲ್ಲ. ಹಣ ಸಿಗದಿದ್ದರೆ ಜೀವನ ನಡೆಸುವುದು ಕಷ್ಟ ಎಂಬ ಭಯದಿಂದ ಜಿತು ಅವರು ಸೋಮವಾರ ಬೇರೆ ದಾರಿ ಕಾಣದೆ ಹಳ್ಳಿಯ ಸ್ಮಶಾನಕ್ಕೆ ಹೋಗಿ ಸಹೋದರಿಯ ಅವಶೇಷಗಳನ್ನು ಅಗೆದು ತೆಗೆದಿದ್ದಾರೆ. ಅಸ್ಥಿಪಂಜರವನ್ನು ಬಟ್ಟೆಯಲ್ಲಿ ಸುತ್ತಿ ಭುಜದ ಮೇಲೆ ಹೊತ್ತುಕೊಂಡು 3 ಕಿಲೋಮೀಟರ್ ನಡೆದು ಬ್ಯಾಂಕ್‌ಗೆ ಬಂದಿದ್ದಾರೆ. ಅಸ್ಥಿಪಂಜರವನ್ನು ಬ್ಯಾಂಕ್ ಎದುರು ಇರಿಸಿದಾಗ ಅಲ್ಲಿದ್ದ ಜನರು ಮತ್ತು ಬ್ಯಾಂಕ್ ಸಿಬ್ಬಂದಿ ದಿಗ್ಭ್ರಮೆಗೊಂಡರು. ಈ ದೃಶ್ಯ ಕಂಡ ಗ್ರಾಮಸ್ಥರು ಬ್ಯಾಂಕ್‌ನ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಜಿತು ಮುಂಡಾ ಅವರನ್ನು ಸಮಾಧಾನಪಡಿಸಿದರು. ಕೇವಲ ದಾಖಲೆಗಳಿಗಾಗಿ ಹಠ ಹಿಡಿಯುವ ಬದಲು ಸ್ಥಳೀಯ ಸರಪಂಚರ ಮೂಲಕ ಬ್ಯಾಂಕ್ ಪರಿಶೀಲನೆ ನಡೆಸಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಪೊಲೀಸರು ಈ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ನಿಭಾಯಿಸುವುದಾಗಿ ಭರವಸೆ ನೀಡಿದ್ದಾರೆ ಮತ್ತು ಬ್ಯಾಂಕ್‌ನಿಂದ ಸೂಕ್ತ ವಿವರಣೆ ಕೇಳಿದ್ದಾರೆ.

























