ಒಂಟಿ ಮಹಿಳೆಯರು ಇರುವ ಮನೆಗಳಿಗೆ ಬಂದು ನೀರು ಕೇಳಿದ ಯುವಕ
ಉಪ್ಪಿನಂಗಡಿ: ನೀರು ಕೇಳುವ ನೆಪದಲ್ಲಿ ಹಾಡಹಗಲೇ ಮನೆಗೆ ಬಂದು ಮಹಿಳೆಯರೇ ಇರುವುದನ್ನು ಖಚಿತಪಡಿಸಿಕೊಂಡು ಒಳಗೆ ನುಗ್ಗಿ ಬಾಗಿಲ ಚಿಲಕ ಹಾಕಿ ಮನೆ ಮಂದಿಯನ್ನು ಭೀತಿಗೊಳಪಡಿಸಿದ್ದ ಅಪರಿಚಿತ ವ್ಯಕ್ತಿಯನ್ನು ಉಪ್ಪಿನಂಗಡಿಯ ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಭಾನುವಾರ ನಡೆದಿದೆ.
ಇಲ್ಲಿನ ಬ್ಯಾಂಕ್ ರಸ್ತೆಯ ಬಳಿ ವೃದ್ಧೆಯೋರ್ವರು ಮಾತ್ರ ಮನೆಯಲ್ಲಿದ್ದ ವೇಳೆ ನೀರು ಕೇಳುವ ನೆಪದಲ್ಲಿ ಬಂದ ವ್ಯಕ್ತಿ ವೃದ್ಧೆ ನೀರು ತರಲೆಂದು ಅಡುಗೆ ಕೋಣೆಗೆ ಹೋದ ವೇಳೆ ನೇರವಾಗಿ ಒಳಗಿ ನುಗ್ಗಿ ಮನೆಯ ಬಾಗಿಲ ಚಿಲಕ ಹಾಕಿದ್ದ. ಇದನ್ನು ಕಂಡು ವೃದ್ಧೆ ಭೀತಿಯಿಂದ ಬೊಬ್ಬೆ ಹಾಕಿದಾಗ ಅಲ್ಲಿಂದ ಓಡಿ ಹೋಗಿ ಸನಿಹದಲ್ಲೇ ಇದ್ದ ಇನ್ನೊಂದು ಒಂಟಿ ಮಹಿಳೆ ಇರುವ ಮನೆಯ ಕೊಠಡಿಯೊಂದಕ್ಕೆ ನುಗ್ಗಿ ಬಾಗಿಲ ಚಿಲಕ ಹಾಕಲೆತ್ನಿಸಿದ್ದ.
ಇದನ್ನು ಗಮನಿಸಿದ ಮನೆ ಮಹಿಳೆ ಮತ್ತು ಸ್ಥಳೀಯರು ಬೊಬ್ಬೆ ಹೊಡೆದಾಗ ಅಲ್ಲಿಂದ ಪರಾರಿಯಾದ ಈತ ಉದ್ಯಮಿಯೋರ್ವರ ಮನೆಯ ಹಿಂಭಾಗದ ಕಟ್ಟಡದಲ್ಲಿ ಅವಿತು ಕೂತಿದ್ದ. ಅವನನ್ನು ಹಿಂಬಾಲಿಸಿಕೊಂಡು ಬಂದ ಸ್ಥಳೀಯರು ಈ ಬಗ್ಗೆ ಉದ್ಯಮಿಗೆ ಮಾಹಿತಿ ನೀಡಿ, ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದರು. ಪ್ರಾರಂಭದಲ್ಲಿ ಮೂಕ ಭಾಷೆಯಲ್ಲಿ ನೀರು ಕೇಳುತ್ತಿದ್ದ ಈತ ಪೊಲೀಸರಿಗೊಪ್ಪಿಸುವ ವೇಳೆ ಮಲಯಾಳ ಭಾಷೆಯಲ್ಲಿ ಮಾತನಾಡಿ ತಾನು ರಬ್ಬರ್ ಟ್ಯಾಪಿಂಗ್ ವೃತ್ತಿಯವನೆಂದು ತಿಳಿಸಿದ್ದ. ಬಿಸಿಲ ಬೇಗೆಯಲ್ಲಿ ಬಳಲಿ ಬಂದಾತನಿಗೆ ನೀರು ಕೊಡಲೆಂದು ಮಾನವೀಯ ನೆಲೆಯಲ್ಲಿ ಸ್ಪಂದಿಸಿದಾಗ ಈ ರೀತಿಯಲ್ಲಿ ಮನೆಗೆ ನುಗ್ಗಿದ ವ್ಯಕ್ತಿಯ ಬಗ್ಗೆ ಪರಿಸರದಲ್ಲಿ ಭೀತಿ ಮೂಡಿದ್ದು, ಪೊಲೀಸ್ ಅಧಿಕಾರಿಗಳು ವಶದಲ್ಲಿರುವ ವ್ಯಕ್ತಿಯ ಬಗ್ಗೆ ಪೂರ್ವಾಪರ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಅಗ್ರಹಿಸಿದ್ದಾರೆ.

























