ಶಾಲೆಗಳಲ್ಲಿ ಕನ್ನಡ ದಿನ ಪತ್ರಿಕೆ ಓದು ಕಡ್ಡಾಯ

ಪ್ರತಿದಿನ ಕನಿಷ್ಠ 10 ನಿಮಿಷ ಪತ್ರಿಕೆ ಓದಿಸಲು ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು : ರಾಜ್ಯಾದ್ಯಂತ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ 10 ನಿಮಿಷಗಳ ಕಾಲ ಕನ್ನಡ ದಿನ ಪತ್ರಿಕೆಗಳನ್ನು ಓದುವುದನ್ನು ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಪ್ರತಿದಿನ ಬೆಳಗಿನ ಪ್ರಾರ್ಥನೆಯ ನಂತರ ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ದಾಸರಾಗುತ್ತಿದ್ದು, ಇದರಿಂದ ಅವರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಉಂಟಾಗುತ್ತಿದೆ. ಮೊಬೈಲ್ ಚಟಕ್ಕೆ ಬ್ರೇಕ್ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುತ್ತಿರುವ ದೃಷ್ಟಿ ದೋಷ, ಸ್ಮರಣಶಕ್ತಿ ಕುಂಠಿತ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಇದರ ಗುರಿ.























































 
 

ದಿನಪತ್ರಿಕೆ ಓದುವುದರಿಂದ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಹೆಚ್ಚುವುದಲ್ಲದೆ, ಕನ್ನಡ ಭಾಷಾ ಪ್ರೌಢಿಮೆ, ಶಬ್ದಕೋಶ ಮತ್ತು ಬರವಣಿಗೆಯ ಕೌಶಲಗಳು ಉತ್ತಮಗೊಳ್ಳಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಿದ್ದು, ಅದರ ಮುಂದಿನ ಭಾಗವಾಗಿ ಈ ಶೈಕ್ಷಣಿಕ ಸುಧಾರಣೆ ಜಾರಿಗೆ ಬಂದಿದೆ. ಈ ನೂತನ ನಿಯಮವು ಮಕ್ಕಳನ್ನು ಬಾಹ್ಯ ಜಗತ್ತಿನ ವಿದ್ಯಮಾನಗಳೊಂದಿಗೆ ಸಂಪರ್ಕಿಸಲು ಮತ್ತು ಅವರಲ್ಲಿ ಓದುವ ಆಸಕ್ತಿ ಮೂಡಿಸಲು ಸಹಕಾರಿಯಾಗಲಿದೆ ಎಂದು ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.

error: Content is protected !!
Scroll to Top