ಅಮೆರಿಕ ಪ್ರತಿನಿಧಿಗಳನ್ನು ಭೇಟಿಯಾಗಲು ನಿರಾಕರಿಸಿ ನಿರ್ಗಮಿಸಿದ ಇರಾನ್ ನಿಯೋಗ
ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಆಯೋಜನೆಯಾಗಿದ್ದ ಇರಾನ್-ಅಮೆರಿಕ ಸಂಧಾನ ಸಭೆ ಮತ್ತೆ ಮುರಿದುಬಿದ್ದಿದ್ದು, ಸಂಧಾನಕ್ಕಾಗಿ ಆಗಮಿಸಿದ್ದ ಅಮೆರಿಕ ಸರ್ಕಾರದ ನಿಯೋಗವನ್ನು ಭೇಟಿಯಾಗದೆ ಇರಾನ್ ನಿಯೋಗ ನಿರ್ಗಮಿಸಿದೆ. ಪಾಕಿಸ್ತಾನದಲ್ಲಿ ಅಮೆರಿಕಕ್ಕೆ ಜಾಗತಿಕ ಮುಜುಗರವಾಗಿದ್ದು, ಅಮೆರಿಕದ ಪ್ರತಿನಿಧಿಯನ್ನು ಭೇಟಿಯಾಗದೆ ಇರಾನ್ ನಿಯೋಗವು ಪಾಕಿಸ್ತಾನದಿಂದ ನಿರ್ಗಮಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗ ಅಮೆರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಶನಿವಾರ ಇಸ್ಲಾಮಾಬಾದ್‌ನಿಂದ ನಿರ್ಗಮಿಸಿತು.
ಹೀಗಾಗಿ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನಕ್ಕೆ ಎರಡೂ ದೇಶಗಳನ್ನು ಮಾತುಕತೆಗೆ ಒಪ್ಪಿಸಲು ಸಾಧ್ಯವಾಗಲಿಲ್ಲ. ಈ ಮಾತುಕತೆಗಾಗಿ ಇಸ್ಲಾಮಾಬಾದ್‌ನಲ್ಲಿ ಕಟ್ಟುನಿಟ್ಟಿನ ಭದ್ರತೆ ಹೇರಲಾಗಿತ್ತು. ಅದಾಗ್ಯೂ ಸಂಧಾನ ಮಾತುಕತೆ ವಿಫಲವಾಗಿದ್ದು ಅತ್ತ ಅಮೆರಿಕ ಮತ್ತು ಇತ್ತ ಪಾಕಿಸ್ತಾನಕ್ಕೆ ತೀವ್ರ ಮುಜುಗರವಾಗುವಂತೆ ಮಾಡಿದೆ.
ಈ ಸಭೆಗೂ ಮೊದಲೇ ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ನೇತೃತ್ವದ ಅಮೆರಿಕದ ತಂಡವು ಇಸ್ಲಾಮಾಬಾದ್ ತಲುಪುವ ಮೊದಲೇ ಇರಾನ್ ನಿಯೋಗವು ಅಲ್ಲಿಂದ ಹೊರಟು ಹೋಗಿದೆ.
ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನ ಕದನ ವಿರಾಮದ ಉಲ್ಲಂಘನೆ ಎಂದು ಇರಾನ್ ಆರೋಪಿಸಿದೆ. ವರದಿಗಳ ಪ್ರಕಾರ ಇರಾನ್ ಕೆಳಹಂತದ ಪ್ರತಿನಿಧಿಗಳ ಬದಲಿಗೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗೆ ಮಾತುಕತೆ ನಡೆಸಲು ಆಸಕ್ತಿ ಹೊಂದಿದೆ. ಈಗಿನ ನಿಯೋಗವನ್ನು ಭೇಟಿಯಾಗುವುದು ತನಗೆ ಮಾಡಿದ “ಅಪಮಾನ” ಎಂದು ಅದು ಭಾವಿಸಿದೆ. ಇದೇ ಕಾರಣಕ್ಕೆ ಮಾತುಕತೆಗೆ ನಿಲ್ಲದೆ ಇರಾನ್ ನಿಯೋಗ ಹೊರಟು ಹೋಗಿದೆ ಎನ್ನಲಾಗಿದೆ.

























