ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಕಿರುಕುಳದ ವಿವರ ಬಿಚ್ಚಿಟ್ಟ ಪೊಲೀಸರು
ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಗಳು ನಿತಾರಾ ಕೂಡ ಸೈಬರ್ ಕಾಮಣ್ಣರ ಕಿರುಕುಳಕ್ಕೆ ಗುರಿಯಾಗಿದ್ದಾರೆ. ಬೆತ್ತಲೆ ಫೋಟೋ ಕಳಿಸುವಂತೆ ವ್ಯಕ್ತಿಯೋರ್ವ ನಿತಾರಾಗೆ ಹೇಳಿದ್ದು, ಆತನನ್ನು ಪೊಲೀಸರು ಹುಡುಕಿ ಬಂಧಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮಹಾರಾಷ್ಟ್ರ ಸೈಬರ್ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.
ನಿತಾರಾ ಆನ್ಲೈನ್ ಅಲ್ಲಿ ಗೇಮ್ ಆಡುವಾಗ ಬೆತ್ತಲೆ ಫೋಟೋ ಕಳಿಸುವಂತೆ ಅಪರಿಚಿತ ವ್ಯಕ್ತಿ ಮೆಸೇಜ್ ಮಾಡಿದ್ದ. ಈ ವಿಷಯವನ್ನು ನಿತಾರಾ ಕುಟುಂಬದ ಗಮನಕ್ಕೆ ತಂದಿದ್ದರು. ಅವರು ಸೈಬರ್ ಠಾಣೆಗೆ ದೂರು ದಾಖಲು ಮಾಡಿದ್ದರು. ದೂರಿನ ಅನ್ವಯ ಓರ್ವನ ಬಂಧನ ಆಗಿದೆ. ಮಹಾರಾಷ್ಟ್ರ ಸೈಬರ್ ವಿಭಾಗ ಮುಂಬೈನ ಆರ್.ಡಿ. ನ್ಯಾಷನಲ್ ಕಾಲೇಜಿನಲ್ಲಿ ಸೈಬರ್ ಜಾಗೃತಿಗಾಗಿ ವಿಶೇಷ ಅಧಿವೇಶನವನ್ನು ಆಯೋಜಿಸಿತ್ತು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಇಲ್ಲಿ ಆಗಿದೆ. ಈ ಈವೆಂಟ್ನಲ್ಲಿ ಒಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ. ಆನ್ಲೈನ್ ಕಿರುಕುಳ ನೀಡುವವರು ಅಕ್ಷಯ್ ಕುಮಾರ್ ಮಗಳನ್ನು ಬಿಟ್ಟಿರಲಿಲ್ಲ.
ಅಕ್ಷಯ್ ಕುಮಾರ್ ನಮ್ಮ ಜೊತೆ ಒಂದು ಶಾಕಿಂಗ್ ಸುದ್ದಿ ಹೇಳಿದ್ದರು. ಮಗಳಿಗೆ ಆದ ಸೈಬರ್ ಕಿರುಕುಳದ ಬಗ್ಗೆ ಅವರು ವಿವರಿಸಿದ್ದರು. ಆ ಹುಡುಗಿ ತುಂಬಾ ಧೈರ್ಯಶಾಲಿಯಾಗಿದ್ದಳು. ಹೀಗಾಗಿ ಈ ವಿಷಯವನ್ನು ಹೆತ್ತವರಿಗೆ ತಿಳಿಸಿದಳು. ಅವರು ನಮಗೆ ದೂರು ನೀಡಿದರು ಎಂದು ಮಹಾರಾಷ್ಟ್ರ ಸೈಬರ್ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯಶಸ್ವಿ ಯಾದವ್ ಹೇಳಿದ್ದಾರೆ.
‘ಕೆಲವು ತಿಂಗಳ ಹಿಂದೆ ನನ್ನ ಮನೆಯಲ್ಲಿ ನಡೆದ ಒಂದು ಸಣ್ಣ ಘಟನೆಯ ಬಗ್ಗೆ ನಿಮಗೆ ಹೇಳಬೇಕು. ನನ್ನ ಮಗಳು ವಿಡಿಯೋ ಗೇಮ್ ಆಡುತ್ತಿದ್ದಳು. ಅಪರಿತ ವ್ಯಕ್ತಿ ಇವಳಿಗೆ ಎದುರಾದ. ನೀವು ಚೆನ್ನಾಗಿ ಆಡುತ್ತೀರಾ ಎಂದೇನಾದರೂ ಹೇಳಬಹುದು. ಆದರೆ, ಆತ ನಿಮ್ಮದು ಯಾವ ಊರು ಎಂದು ಕೇಳಿದ. ಇದಕ್ಕೆ ಆಕೆ ಮುಂಬೈ ಎಂದಳು. ಅವನು ಸಾಮಾನ್ಯರಂತೆ ಮಾತನಾಡುತ್ತಿದ್ದ’ ಎಂದು ಅಕ್ಷಯ್ ವಿವರಿಸಿದ್ದರು.
‘ನೀವು ಹುಡುಗನೋ ಅಥವಾ ಹುಡುಗಿಯೋ ಎಂಬ ಪ್ರಶ್ನೆ ಬಂತು. ನನ್ನ ಮಗಳು ಹುಡುಗಿ ಎಂದು ಉತ್ತರಿಸಿದಳು. ‘ನಿಮ್ಮ ನಗ್ನ ಚಿತ್ರವನ್ನು ನನಗೆ ಕಳುಹಿಸಬಹುದೇ?’ ಎಂಬ ಸಂದೇಶವನ್ನು ಆತ ಕಳುಹಿಸಿದನು. ನನ್ನ ಮಗಳು, ಎಲ್ಲವನ್ನೂ ಆಫ್ ಮಾಡಿದಳು. ಅವಳು ಹೋಗಿ ನನ್ನ ಹೆಂಡತಿಗೆ (ಟ್ವಿಂಕಲ್ ಖನ್ನಾ) ಈ ವಿಷಯ ಹೇಳಿದಳು’ ಎಂದು ಅಕ್ಷಯ್ ವಿವರಿಸಿದ್ದರು. ಈ ಪ್ರಕರಣ ಸೈಬರ್ ಠಾಣೆಗೆ ಬಂದಿತ್ತು. ಈ ಸಂಬಂಧ ಓರ್ವನ ಬಂಧನ ಆಯಿತು.

























