ಚಿಕ್ಕಮಗಳೂರು: ಮಧ್ಯರಾತ್ರಿ ಸಮಯದಲ್ಲಿ ಕುಡಿದು ಅಮಲಿನಲ್ಲಿ ಸರ್ಕಾರಿ ಬಸ್ಸನ್ನು ಅಡ್ಡಗಟ್ಟಿ ಹುಚ್ಚಾಟ ಮೆರೆದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಸರ್ಕಾರಿ ಬಸ್ಸು ಕಡೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿತ್ತು. ನಗರದ ಟೆಂಟರ್ ಚಿಕನ್ ಸಮೀಪ ಕುಡುಕರು ತಮ್ಮ ಆಟೋ ಅಡ್ಡಗಟ್ಟಿ ತಡೆದು ರಸ್ತೆ ನಡುವಲ್ಲೇ ಬಸ್ಸು ನಿಲ್ಲುವಂತೆ ಮಾಡಿದ್ದಾರೆ. ಸುಮಾರು ರಾತ್ರಿ 12 ಗಂಟೆಯ ವೇಳೆ ಈ ಘಟನೆ ನಡೆದಿದ್ದು, ಅಸಭ್ಯವಾಗಿ ವರ್ತಿಸುತ್ತಾ ಬಸ್ಸಿನ ಮುಂದೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ.
ತೊಂದರೆ ಮಾಡದಂತೆ ಬಸ್ಸಿನ ಚಾಲಕ ಮನವಿ ಮಾಡಿದರೂ ಅದಕ್ಕೆ ಕ್ಯಾರೇ ಎನ್ನದೆ ತೂರಾಡುತ್ತಾ, ಕೂಗಾಡುತ್ತಾ ಕಿರಿಕಿರಿ ಮಾಡಿದ್ದಾರೆ.
ಕುಡುಕರ ಈ ಹುಚ್ಚಾಟ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಮೊಬೈಲ್ನಲ್ಲಿ ಸೆರೆಯಾಗಿದ್ದು, ವ್ಯಾಪಕವಾಗಿ ವೈರಲ್ ಆಗಿದೆ. ಸಾರ್ವಜನಿಕರಿಗೆ ರಾತ್ರಿ ವೇಳೆಯಲ್ಲೂ ಈ ರೀತಿ ತೊಂದರೆ ನೀಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವುದಾಗಿದೆ.

























