ಸುಟ್ಟು ಹೋದ ಮುಖ, ಊನಗೊಂಡ ಕಾಲು- ಮಾತನಾಡಲು, ನಡೆದಾಡಲು ಆಗದ ಸ್ಥಿತಿಯಲ್ಲಿ ಖಮೇನಿ
ಟೆಹ್ರಾನ್: ಇಸ್ರೇಲ್‌ನ ಕ್ಷಿಪಣಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಈಗಲೂ ಜೀವಂತವಾಗಿದ್ದಾರೆ. ಆದರೆ ಅವರು ನಡೆದಾಡುವ ಮತ್ತು ಮಾತನಾಡುವ ಸ್ಥಿತಯಲ್ಲಿಲ್ಲ. ಅವರ ಮುಖದ ಒಂದು ಭಾಗ ತುಟಿಯ ಸಮೇತ ಸುಟ್ಟು ಹೋಗಿದೆ. ಒಂದು ಕಾಲು ಊನಗೊಂಡಿದ್ದು ಅದಕ್ಕೆ ಈಗಾಗಲೇ ಮೂರು ಸರ್ಜರಿಗಳನ್ನು ಮಾಡಲಾಗಿದೆ ಎಂದು ವರದಿಗಳು ಹೇಳಿವೆ.
ಅವರು ಅಧಿಕಾರ ನಡೆಸುತ್ತಿರುವ ರೀತಿ ಮತ್ತು ಅವರ ಪ್ರಸ್ತುತ ಆರೋಗ್ಯ ಸ್ಥಿತಿ ಅಕ್ಷರಶಃ ಬೆಚ್ಚಿಬೀಳಿಸುವಂತಿದೆ. ಫೆಬ್ರವರಿ 28ರ ಅಮೆರಿಕ-ಇಸ್ರೇಲಿ ವೈಮಾನಿಕ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಅವರು, ಈಗ ಮಾತಿಲ್ಲದೆ ‘ನಿಗೂಢ ನಾಯಕ’ನಾಗಿ ಉಳಿದಿದ್ದಾರೆ.
ದಿ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಮೊಜ್ತಬಾ ಖಮೇನಿ ಸದ್ಯ ವೈದ್ಯಕೀಯ ಸಿಬ್ಬಂದಿಯ ಕಣ್ಗಾವಲಿನಲ್ಲಿದ್ದಾರೆ. ಅವರ ಮುಖ ಮತ್ತು ತುಟಿಗಳ ಮೇಲೆ ತೀವ್ರವಾದ ಸುಟ್ಟಗಾಯಗಳಾಗಿದ್ದು, ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಸಹಜ ಸ್ಥಿತಿಗೆ ಮರಳಲು ಅವರಿಗೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದೆ. ಅವರ ಒಂದು ಕಾಲಿಗೆ ಈಗಾಗಲೇ ಮೂರು ಶಸ್ತ್ರಚಿಕಿತ್ಸೆಗಳಾಗಿದ್ದು, ಅವರು ಈಗ ಕೃತಕ ಅಂಗದ ಜೋಡಣೆಗಾಗಿ ಕಾಯುತ್ತಿದ್ದಾರೆ. ಒಂದು ಕೈ ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಿದೆ.
ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಇಂದಿನ ಡಿಜಿಟಲ್ ಯುಗದಲ್ಲಿ ಮೊಜ್ತಬಾ ಖಮೇನಿ ಅವರು ದೇಶದ ಆಡಳಿತ ನಡೆಸುತ್ತಿರುವುದು ‘ಕೈಬರಹದ ಚೀಟಿಗಳ’ ಮೂಲಕ. ಐಆರ್‌ಜಿಸಿ ಕಮಾಂಡರ್‌ಗಳು ಅಥವಾ ಸಚಿವರು ಅವರನ್ನು ನೇರವಾಗಿ ಭೇಟಿ ಮಾಡುತ್ತಿಲ್ಲ. ವಿಶ್ವಾಸಾರ್ಹ ಕೊರಿಯರ್‌ಗಳ ಮೂಲಕ ಮೊಹರು ಮಾಡಿದ ಕೈಬರಹದ ಸಂದೇಶಗಳು ರಸ್ತೆಯ ಮೂಲಕ ರವಾನೆಯಾಗುತ್ತವೆ. ಮೊಜ್ತಬಾ ಅವರ ಪ್ರತಿಕ್ರಿಯೆಗಳು ಕೂಡ ಅದೇ ಮಾದರಿಯಲ್ಲಿ ಮರಳಿ ಬರುತ್ತವೆ. ಅವರ ದೈಹಿಕ ಅಸಾಮರ್ಥ್ಯ ಮತ್ತು ಸುರಕ್ಷತೆಯ ಕಾರಣದಿಂದಾಗಿ ದೇಶದ ಪ್ರಮುಖ ನಿರ್ಧಾರಗಳನ್ನು ಪ್ರಸ್ತುತ ಮಿಲಿಟರಿ ನಾಯಕರಿಗೆ ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇಸ್ರೇಲ್ ಅವರನ್ನು ಪತ್ತೆಹಚ್ಚಿ ಕೊಲ್ಲಬಹುದು ಎಂಬ ಭಯದಿಂದ ಹಿರಿಯ ಸರ್ಕಾರಿ ಅಧಿಕಾರಿಗಳು ಅವರನ್ನು ಭೇಟಿ ಮಾಡುತ್ತಿಲ್ಲ.

























