ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವಾಗ ಸ್ಕೂಟಿಯ ಹಿಂಬದಿಗೆ ಗುದ್ದಿದ ಬಸ್
ಉಡುಪಿ: ಎಕ್ಸ್‌ಪ್ರೆಸ್ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ವರ್ಷದ ಬಾಲಕಿ ಮೃತಪಟ್ಟ ಘಟನೆ ಕಾಪು ಹೆದ್ದಾರಿಯಲ್ಲಿ ಸಂಭವಿಸಿದೆ. ಕಾಪು ಸಾಯಿ ಸರ್ವಿಸ್ ಸ್ಟೇಶನ್ ಬಳಿ ಈ ಅಪಘಾತ ಸಂಬವಿಸಿದ್ದು, ಬಸ್ ಹಿಂಬದಿಯಿಂದ ಢಿಕ್ಕಿಯಾದ ಪರಿಣಾಮ ತಂದೆಯೊಂದಿಗೆ ಸಹಸವಾರೆಯಾಗಿ ಬಂದಿದ್ದ ಬಾಲಕಿ ಸಾತ್ವಿ ಶೆಟ್ಟಿ (8) ತೀವ್ರಗಾಯಗಳೊಂದಿಗೆ ಕೊನೆಯುಸಿರೆಳೆದಿದ್ದಾರೆ. ಕಾಪು ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದಂತೆ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.
ದುಬಾಯಿಯಲ್ಲಿ ವಾಸವಿದ್ದ ಈ ಕುಟುಂಬ ಮುಂದೆ ಊರಿನಲ್ಲಿಯೇ ನೆಲೆಸುವ ಸಿದ್ಧತೆಯಲ್ಲಿತ್ತು. ಸಾತ್ವಿಗಾಗಿ ಆಕೆಯ ಹೆತ್ತವರು ಉಡುಪಿಯ ಖಾಸಗಿ ಶಾಲೆಯಲ್ಲಿ ಪ್ರವೇಶಾತಿಯನ್ನೂ ಮುಗಿಸಿದ್ದರು. ಮರುದಿನ ಆಕೆಯ ತಂದೆ ನಿತ್ಯಾನಂದ ಶೆಟ್ಟಿ ಮಾತ್ರ ದುಬಾಯಿಗೆ ತೆರಳುವರಿದ್ದು, ಕಾಪು ಪೇಟೆಗೆ ಏನನ್ನೋ ತರಲು ಹೋಗಿ ವಾಪಾಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಅಪಘಾತದ ತಾಣಕ್ಕೂ ಅವರ ಪೂವಣಿಗುತ್ತು ಮನೆಗೂ ಕೇವಲ ಅರ್ಧ ಕಿ.ಮೀ. ದೂರವಷ್ಟೇ ಬಾಕಿ ಇತ್ತು. ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಖಾಸಗಿ ಬಸ್ಸು ಸ್ಕೂಟಿಗೆ ಡಿಕ್ಕಿ ಹೊಡೆದು ತಂದೆಯೊಂದಿಗೆ ಬಂದಿದ್ದ ಬಾಲಕಿ ಸಾತ್ವಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನಿತ್ಯಾನಂದ ಶೆಟ್ಟಿಯವರಿಗೂ ಗಾಯಗಳಾಗಿವೆ. ಕಾಪು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

























