ಮಂಗಳೂರು: ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆ ಮತ್ತು ಮಹಿಳಾ ಠಾಣೆಯಲ್ಲಿ ಮತ್ತೆರಡು ಪ್ರಕರಣಗಳು ದಾಖಲಾಗಿವೆ.
ಕಲಾವಿದ ಸುಂದರ್ ರೈ ಮಂದಾರ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಕೊಡಪದವು ಅವರ ತಾಯಿಯ ಹೆಸರಿನಲ್ಲಿ ತಿಮರೋಡಿ ವಿರುದ್ಧ ದೂರು ದಾಖಲಾಗಿರುವುದಾಗಿದೆ.
ಕಳೆದ ಆರು ತಿಂಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ‘ಬುರುಡೆ ಗ್ಯಾಂಗ್’ ಹೆಸರಿನ ಹಾಸ್ಯ ಕಾರ್ಯಕ್ರಮದಲ್ಲಿ ಹೆಸರು ಹೇಳದೆಯೇ ತನ್ನನ್ನು ವಿಡಂಬನೆ ಮಾಡಿರುವುದಾಗಿ ಆರೋಪಿಸಿ ಕಲಾವಿದ ಪ್ರಜ್ವಲ್ ಗುರುವಾಯನಕೆರೆಗೆ ಫೋನ್ ಮೂಲಕ ತಿಮರೋಡಿ ನಿಂದಿಸಿರುವುದಾಗಿದೆ. ಅವರನ್ನು ಪ್ರಶ್ನೆ ಮಾಡಿದ್ದು ಮಾತ್ರವಲ್ಲದೆ ದಿನೇಶ್ ಕೊಡಪದವು, ಸುಂದರ್ ರೈ ಮಂದಾರ ಅವರನ್ನು ಅವಾಚ್ಯವಾಗಿ ನಿಂದನೆ ಮಾಡಿದ್ದಾರೆ.
ಈ ಫೋನ್ ಕರೆಯನ್ನು ಪ್ರಜ್ವಲ್ ಅವರು ರೆಕಾರ್ಡ್ ಮಾಡಿಟ್ಟು ಸುಂದರ್ ರೈ ಮಂದಾರ ಮತ್ತು ದಿನೇಶ್ ಅವರಿಗೆ ಕಳುಹಿಸಿದ್ದರು. ಆ ರೆಕಾರ್ಡ್ ಅನ್ನು ಮುಂದಿಟ್ಟುಕೊಂಡು ಮಹಿಳೆಯರಿಗೆ ಅವಾಚ್ಯವಾಗಿ ನಿಂದನೆ ಮಾಡಿದ ತಿಮರೋಡಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ತಿಮರೋಡಿ ವಿರುದ್ಧ ಈಗಾಗಲೇ ಗಡಿಪಾರು ಆದೇಶ ಇದ್ದು, ಹೈಕೋರ್ಟ್‌ನಲ್ಲಿ ಪರ ಮತ್ತು ವಿರೋಧ ಚರ್ಚೆಗಳು ಕೂಡಾ ನಡೆಯುತ್ತಿವೆ. ಇದರ ನಡುವೆ ಕಲಾವಿದರೂ ದೂರು ನೀಡಿರುವುದು ತಿಮರೋಡಿಗೆ ಮತ್ತಷ್ಟು ಹಿನ್ನಡೆಯಾಗುವ ಸಾಧ್ಯತೆ ಇದೆ.
ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿರುವ ಕಲಾವಿದರಾದ ಸುಂದರ ರೈ ಮಂದಾರ, ದಿನೇಶ್ ಕೊಡಪದವು, ಪ್ರಜ್ವಲ್ ಗುರುವಾಯನಕೆರೆ ಮತ್ತು ಭಾಗವತ ಧೀರಜ್ ರೈ ಸಂಪಾಜೆ, ನಾವೇನೂ ಧರ್ಮಸ್ಥಳ ಘಟನೆಯನ್ನು ಅಥವಾ ಮಹೇಶ್ ಶೆಟ್ಟಿ ತಿಮರೋಡಿಯನ್ನು ಉಲ್ಲೇಖಿಸಿಲ್ಲ. ಅಲ್ಲಿನ ಘಟನೆಗೂ ನಮ್ಮ ಹಾಸ್ಯ ಕಾರ್ಯಕ್ರಮಕ್ಕೂ ಸಂಬಂಧವೇ ಇಲ್ಲ. ಸುಳ್ಳಿನ ಮೂಲಕ ಪ್ರಭಾವಿ ವ್ಯಕ್ತಿಯನ್ನು ತೇಜೋವಧೆ ಮಾಡುವುದು ಮತ್ತು ಕೊನೆಯಲ್ಲಿ ಸಮಾಜಕ್ಕೆ ಮೆಸೇಜ್ ಕೊಡುವ ಕತೆಯಿದೆ. ನಮ್ಮ ಭಾಗವತರಾದ ಧೀರಜ್ ರೈ ಮತ್ತು ದಿನೇಶ್ ಕೋಡಪದವು ಕತೆ ಹೆಣೆದಿದ್ದು ಕೇಬಲ್ ವಾಹಿನಿಯ ಮುಖ್ಯಸ್ಥರು ಬುರುಡೆ ಗ್ಯಾಂಗ್ ಎಂದು ಹೆಸರು ಸೂಚಿಸಿದ್ದರು. ಅದು ಪ್ರಸಾರಗೊಂಡು ಯೂಟ್ಯೂಬ್ ನಲ್ಲಿದ್ದು ಇಷ್ಟು ದಿನಗಳ ಬಳಿಕ ಮಹೇಶ್ ಶೆಟ್ಟಿ ಮೊನ್ನೆ ಕರೆ ಮಾಡಿ ನಮಗೆ ನಿಂದಿಸಿದ್ದಾರೆ.
ನಾವು ಕಲಾವಿದರು ಸಮಾಜದ ಆಸ್ತಿಯಾಗಿದ್ದು, ಸ್ವಾಭಾವಿಕ ಬೈಗುಳ ಏನಿದ್ದರೂ ಸ್ವೀಕರಿಸುತ್ತೇವೆ, ಆದರೆ ತಂದೆ, ತಾಯಿ, ಮನೆಯ ಹೆಣ್ಮಕ್ಕಳಿಗೆ ಅವಾಚ್ಯ ನಿಂದಿಸಿದ್ದಾರೆ. ಇದನ್ನು ಕೇಳಿಯೂ ಹಾಗೇ ಕುಳಿತುಕೊಂಡರೆ ನಮಗೆ ಮರ್ಯಾದೆ ಇಲ್ಲ. ನ್ಯಾಯ ಕೇಳಿ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಇದರಲ್ಲಿ ಯಾರದ್ದೇ ಒತ್ತಡ ಇಲ್ಲ ಎಂದು ಸುಂದರ ರೈ ಹೇಳಿದರು.
ದಿನೇಶ್ ಕೋಡಪದವು ಮಾತನಾಡಿ, ಆ ಜನ ಪೆದಂಬು ಎಂದು ಹೇಳುತ್ತದೆ, ನಮಗೂ ಅದಕ್ಕಿಂತ ಕೆಟ್ಟ ಪದಗಳ ಪೆದಂಬು ಗೊತ್ತಿದೆ. ನನಗೆ ಫೋನ್ ಮಾಡುತ್ತಿದ್ದರೆ ಅದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತಿದ್ದೆ. ನಾವು ಅದೇ ರೀತಿಯಲ್ಲಿ ಬೈದರೆ ಅರ್ಥ ಮಾಡಿಕೊಳ್ಳಲು ಎರಡು ದಿನ ಬೇಕಾದೀತು. ಇವರ ಬಗ್ಗೆ ಗೌರವ ಇತ್ತು, ಈಗ ಅದೂ ಹೋಯ್ತು. ನಾವು ದುಡಿದು ತಿನ್ನುವವರು. ನಾಲಗೆಯೇ ನಮ್ಮ ಆಸ್ತಿ. ಹಾಸ್ಯ ಮಾಡಿದ್ದಕ್ಕೆ ಜನ ಗುರುತಿಸಿದ್ದಾರೆ. ಹಾಗಂತ, ಅವಾಚ್ಯ ಹಾಗಂತ, ಅವಾಚ್ಯ ನಿಂದನೆಯನ್ನು ಕೇಳಿಕೊಂಡು ಕುಳಿತುಕೊಳ್ಳುವ ಮನಸ್ಥಿತಿ ಇಲ್ಲ ಎಂದು ಹೇಳಿದರು.

























