ಉಪ್ಪಿನಂಗಡಿ: ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಯಜ್ಞ ಯಾಗಾದಿಗಳು ಆ ಕ್ಷೇತ್ರಕ್ಕೆ ಮಾತ್ರ ಸಂಬಂಧಪಡದೆ ಲೋಕ ಕಲ್ಯಾಣದ ದೃಷ್ಟಿಯಿಂದ ನಡೆಯುತ್ತದೆ. ಎಲ್ಲಾ ಭೇದ ಭಾವವನ್ನು ಮರೆತು ನಾವು ಮಾಡುವ ಪ್ರಾರ್ಥನೆಯಿಂದ ಸಮಾಜಕ್ಕೆ ಭಗವದನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳು ಆಶೀರ್ವಚನದಲ್ಲಿ ತಿಳಿಸಿದರು.
ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿದ ಶ್ರೀ ಮಹಾವಿಷ್ಣುಯಾಗ ಸಂದರ್ಭದಲ್ಲಿ ದೇವಸ್ಥಾನದ ಹೊರಾಂಗಣಕ್ಕೆ ಶಾಶ್ವತ ಮೇಲ್ಚಾವಣಿ ಅಳವಡಿಸುವ ಕಾರ್ಯಕ್ಕೆ ಅವರು ಚಾಲನೆಯನ್ನು ನೀಡಿದರು. ಬಾರ್ಯ ಶ್ರೀ ಪಾಂಡುರಂಗ ಭಜನಾ ಮಂದಿರದ ನೂತನ ಕಟ್ಟಡದ ಪ್ರವೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.
ಮೇಲ್ಚಾವಣಿ ಅಳವಡಿಸುವ ಕಾರ್ಯಕ್ಕೆ ದೇಣಿಗೆ ನೀಡಿದ ಬಲರಾಮ ಆಚಾರ್ಯ ಪುತ್ತೂರು, ಅನಂತ ಕೃಷ್ಣ ಪಡ್ಡಿಲ್ಲಾಯ, ಪ್ರೊ . ಎ .ವಿ. ನಾರಾಯಣ ಪುತ್ತೂರು, ಅಗಸ್ತ್ಯ ಶಿವಪೇಟೆ ಪುತ್ತೂರು, ದಿವಾಕರ ಆಚಾರ್ಯ ಗೇರುಕಟ್ಟೆ, ಪ್ರಶಾಂತ ಬಾರ್ಯ ಮೊದಲಾವರನ್ನು ಸ್ವಾಮೀಜಿಯವರು ಶಾಲು, ಸ್ಮರಣೆಕೆ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಉಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಧರ್ಮದರ್ಶಿ ಡಾ. ಯೋಗೀಂದ್ರ ಭಟ್ ಮಾತನಾಡಿ, ಭೌತಿಕವಾದಂತಹ ಸಂಪತ್ತು ಎಲ್ಲಾ ಕಡೆಯಿದ್ದರೂ ಭಾರತ ದೇಶವು ಧಾರ್ಮಿಕ ಶಕ್ತಿಯಿಂದ ಸೂರ್ಯನ ತೇಜಸ್ಸಿನಂತೆ ವಿಶ್ವವನ್ನು ಬೆಳಗಿಸುತ್ತದೆ ಎಂದರು.
ಮುಖ್ಯ ಅಬ್ಯಾಗತರಾಗಿದ್ದ ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಜಗದೀಶ ಶೆಟ್ಟಿ ನೆಲ್ಲಿಕಟ್ಟೆ ಪುತ್ತೂರು ಶುಭ ಹಾರೈಸಿದರು.
ನವೀನ ಶ್ರೀನಿವಾಸ್ ಪ್ರಾರ್ಥಿಸಿದರು. ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಸೇವಾ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ ಬಾರ್ಯ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಟ್ರಸ್ಟಿಗಳಾದ ಮೋನಪ್ಪ ಗೌಡ , ಶೇಷಪ್ಪ ಸಾಲಿಯನ್, ರಾಮಣ್ಣಗೌಡ, ಶಿವರಾಮ, ಮೋನಪ್ಪ ಗೌಡ ಪ್ರಶಾಂತ ಪೈ ಬಾರ್ಯ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ ಬಾರ್ಯ ಸಿ.ಎ. ಬ್ಯಾಂಕಿನ ನಿರ್ದೇಶಕ ನವೀನ ರೈ ವಂದಿಸಿದರು.

























