ಸುಳ್ಯ: ತಾಲೂಕಿನ ಪೆರಾಜೆ ಗ್ರಾಮದಲ್ಲಿ ಆಕಸ್ಮಿಕವಾಗಿ ಪಾಳು ಬಾವಿಗೆ ಬಿದ್ದ ಒಂಟಿ ಸಲಗವೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸತತ ಎಂಟು ಗಂಟೆಗಳ ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಿದ ಘಟನೆ ನಡೆದಿದೆ.
ಕಲ್ಲಚರ್ಪ ರಾಮ ನಾಯ್ಕ ಎಂಬವರ ತೋಟದಲ್ಲಿ ಎ. 12 ರ ರಾತ್ರಿ ಸಮಯದಲ್ಲಿ ಆನೆಯೊಂದು ನಿರಂತರವಾಗಿ ಘೀಳಿಡುವ ಸದ್ದು ಕೇಳಿ ಬಂದಿತ್ತು. ಸ್ಥಳೀಯರು ತೋಟದಲ್ಲಿ ಹುಡುಕಾಡಿದಾಗ ಸುಮಾರು 30 ಅಡಿ ಆಳದ ಪಾಳು ಬಾವಿಯಲ್ಲಿ ಕಾಡಾನೆಯೊಂದು ಬಿದ್ದಿರುವುದು ಗೊತ್ತಾಗಿದೆ. ಈ ಮಾಹಿತಿಯನ್ನು ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಬಾವಿಗೆ ಸಮನಾಗಿ ಜೆ ಸಿ ಬಿ ಮೂಲಕ ಮಣ್ಣು ಕೊರೆದು ಆನೆಯ ರಕ್ಷಣೆಗೆ ಮುಂದಾಗಿದ್ದಾರೆ. ಅದರಂತೆ ಸೋಮವಾರ ಮಧ್ಯಾಹ್ನದ ಸಮಯಕ್ಕೆ ಆನೆಯನ್ನು ರಕ್ಷಣೆ ಮಾಡಲಾಗಿದ್ದು, ಅದು ಪಕ್ಕದ ಕೃಷಿ ತೋಟದಲ್ಲಿ ಓಡಿ ಮರೆಯಾಗಿದೆ. ಬಳಿಕ ಪಟಾಕಿ ಸಿಡಿಸಿ ಅರಣ್ಯಾಧಿಕಾರಿಗಳು ಪೂವಾಜೆ ರಕ್ಷಿತಾರಣ್ಯಕ್ಕೆ ಸೇರಿಸುವ ಕೆಲಸ ಮಾಡಿದ್ದಾರೆ.

























