ಮನಗೆ ನುಗ್ಗಿ ಯದ್ವಾತದ್ವಾ ಕಡಿದು ಕೊಚ್ಚಿ ಹಾಕಿದ ಹಂತಕರು
ಧಾರವಾಡ: ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಅವರನ್ನು ದುಷ್ಕರ್ಮಿಗಳು ಅವರ ಮನೆಯಲ್ಲೇ ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆಯಿಂದಾಗಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ದಿಗ್ಭ್ರಮೆಗೊಂಡಿದ್ದಾರೆ.
ಧಾರವಾಡದ ಹಾಶ್ಮಿ ನಗರದಲ್ಲಿ ಫೈರೋಜ್ ಪಠಾಣ್ ವಾಸವಿದ್ದರು. ನಿನ್ನೆ ಅವರ ಮನೆಗೆ ನುಗ್ಗಿದ ನಾಲ್ವರು ಅಪರಿಚಿತ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಫೈರೋಜ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃತ್ಯ ಎಸಗಿದ ಕೂಡಲೇ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಹತ್ಯೆಗೀಡಾದ ಫೈರೋಜ್ ಪಠಾಣ್ ಅವರು ಧಾರವಾಡದ ಮುಂಚೂಣಿಯ ಯುವ ನಾಯಕರಾಗಿದ್ದರು. ಆರಂಭದಲ್ಲಿ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು.
ವೈಯಕ್ತಿಕ ದ್ವೇಷ, ರಾಜಕೀಯ ವೈರ ಮತ್ತು ಇತರ ವಿವಾದಗಳು ಸೇರಿದಂತೆ ಎಲ್ಲಾ ಕೋನಗಳಿಂದ ಪರಿಶೀಲಿಸುತ್ತಿದ್ದಾರೆ , ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೊಹಮ್ಮದ್ ಶಾ, ಸದ್ದಾಂ, ಗೌಸ್, ಪರ್ವೇಜ್ ಹತ್ಯೆಗೈದ ಆರೋಪಿಗಳು ಎಂದು ತಿಳಿದುಬಂದಿದೆ. ಕೊಲೆ ಸಂಚು ರೂಪಿಸಿದ್ದ ಅರ್ಬಾಜ್ ಪಠಾಣ್ ಮತ್ತು ಗುಲಾಬ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ಯೆಗೈದ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ವೈಯಕ್ತಿಕ ಹಾಗೂ ರಾಜಕೀಯ ವೈಷಮ್ಯವೇ ಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದ್ದು, ಉಪನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

























