ಮನೆಯವರು ಜಾತ್ರೆಗೆ ಹೋದಾಗ ಹೊಂಚು ಹಾಕಿ ಕಳ್ಳತನ
ಬೆಳ್ತಂಗಡಿ : ಮಚ್ಚಿನ ಗ್ರಾಮದಲ್ಲಿ ಮನೆಯ ಬೀಗ ಒಡೆದು ಒಳನುಗ್ಗಿದ ಕಳ್ಳರು ಸುಮಾರು 13 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 6 ಲಕ್ಷ ನಗದು ಹಣ ಕಳ್ಳತನ ಮಾಡಿರುವ ಘಟನೆ ನಡೆದಿದ್ದು ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಚ್ಚಿನ ಗ್ರಾಮದ ಬಳ್ಳಮಂಜ ಹೊಸಮನೆ ನಿವಾಸಿ ಡಿ. ಮುರಳಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಏ.5ರಂದು ಬಳ್ಳಮಂಜ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಜಾತ್ರಾ ಕಾರ್ಯಕ್ರಮಕ್ಕೆ ಮನೆಯವರೆಲ್ಲರೂ ಮನೆಗೆ ಬೀಗ ಹಾಕಿ ತೆರಳಿದ್ದರು. ಸಂಜೆ 6.40ರ ಸುಮಾರಿಗೆ ಅವರು ದೇವಸ್ಥಾನಕ್ಕೆ ತೆರಳಿದ್ದು 8.30ರ ಸುಮಾರಿಗೆ ಮನೆಗೆ ಹಿಂತಿರುಗಿ ಬಂದು ನೋಡಿದಾಗ ಕಳ್ಳತನವಾಗಿರುವುದು ಕಂಡು ಬಂದಿದೆ.
ಕಳ್ಳರು ಯಾವುದೋ ಆಯುಧದಿಂದ ಮನೆಯ ಮುಂಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ ಕಪಾಟಿನ ಲಾಕ್ ಮುರಿದು ಕಳ್ಳತನ ಮಾಡಿದ್ದಾರೆ. ಒಟ್ಟು 136 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು ಇದರ ಅಂದಾಜು ಮೌಲ್ಯ 13,32,800 ಹಾಗೂ ನಗದು 6 ಲಕ್ಷ ಆಗಬಹುದು. ಕಳವಾದ ಚಿನ್ನಾಭರಣ ಹಾಗೂ ನಗದಿನ ಒಟ್ಟು ಮೌಲ್ಯ 19,32,800/- ಆಗಬಹುದು ಎಂದು ಅಂದಾಜಿಸಲಾಗಿದೆ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 38/2026 ಕಲಂ:331(3)331(4) 305 BNS 2023 ಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಮನೆಯವರು ದೇವಸ್ಥಾನಕ್ಕೆ ಹೋಗುತ್ತಾರೆ ಎಂಬುದರ ಬಗ್ಗೆ ತಿಳಿದಿರುವ ಯಾರೋ ಹೊಂಚು ಹಾಕಿ ಕಳ್ಳತನ ನಡೆಸಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದ್ದು ಸ್ಥಳೀಯರ ಕೈವಾಡವೂ ಇರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.

























